ತೆಲಂಗಾಣ ಸರ್ಕಾರವು 2025-26ನೇ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಆದೇಶವನ್ನು ಹೊರಡಿಸಿದೆ. ಈ ಆದೇಶವು ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಮತ್ತು ಇತರ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ತೆಲುಗು ಭಾಷೆ ಬೋಧನೆ ಕಡ್ಡಾಯವಾಗಲಿದೆ.
ಸ್ಥಳೀಯ ಭಾಷಾ ಸಂಸ್ಕೃತಿಯ ಉಳಿವಿಗೆ ಹೊಸ ಹೆಜ್ಜೆ
2018 ರಲ್ಲೇ ಈ ನಿರ್ಧಾರವನ್ನು ಪರಿಗಣಿಸಲಾಗಿದ್ದರೂ, ಪೂರ್ಣವಾಗಿ ಜಾರಿಗೆ ಬರಲು ಸಾಧ್ಯವಾಗಿಲ್ಲ. ಈ ಬಾರಿ, ಸ್ಥಳೀಯ ಭಾಷಾ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ, ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಈ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಿದೆ. ಶಾಲಾ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ, ತಯಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ಎನ್‌ಇಪಿ ಮತ್ತು ರಾಜ್ಯದ ನಿಲುವು
2020ರಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ ದೇಶದ ಕೆಲವೆಡೆ ಹಿಂದಿ ಹೇರಿಕೆ ಸಂಬಂಧ ಟೀಕೆಗಳು ಕೇಳಿಬಂದಿದ್ದವು. ತಮಿಳುನಾಡು ಸೇರಿದಂತೆ ಹಲವೆಡೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ, ತೆಲಂಗಾಣವು ತನ್ನ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇತರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಕಲಿಕೆ ಸುಲಭಗೊಳಿಸಲು, ‘ವೆನ್ನೆಲ’ ಎಂಬ ಶೀರ್ಷಿಕೆಯ ‘ಸರಳ ತೆಲುಗು’ ಪಠ್ಯಪುಸ್ತಕವನ್ನು ಸರ್ಕಾರ ಅನುಮೋದಿಸಿದೆ. ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ತೆಲುಗು ಭಾಷೆಯನ್ನು ಕಲಿಯಲು ಸಾಧ್ಯವಾಗಲಿದೆ.
ಇಂಗ್ಲಿಷ್ ಮೀಡಿಯಂ ಶಾಲೆಗಳ ಮೇಲೆ ಪರಿಣಾಮ
ಇದೂವರೆಗೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ತೆಲುಗು ಕಡ್ಡಾಯವಾಗಿತ್ತು. ಆದರೆ ಖಾಸಗಿ, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಲ್ಲಿ ತೆಲುಗು ಕಲಿಕೆ ಕಡ್ಡಾಯವಿರಲಿಲ್ಲ. ಈ ಹೊಸ ಆದೇಶದೊಂದಿಗೆ, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ತೆಲುಗು ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿದೆ.