ಹೈದರಾಬಾದ್: ಮಾವೋವಾದಿ ಸಂಘಟನೆಯ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಅತ್ಯಂತ ಪ್ರಭಾವಿ ಮತ್ತು ಉನ್ನತ ಕಮಾಂಡರ್ ಆಗಿದ್ದ ಸೋಡಿ ಕೇಶಲು ಅಲಿಯಾಸ್ ಮಲ್ಲಾ ಸೇರಿದಂತೆ ಒಟ್ಟು 40 ಮಂದಿ ನಕ್ಸಲರು ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಯಾರು ಈ ಸೋಡಿ ಕೇಶಲು ?
ಸೋಡಿ ಕೇಶಲು ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿರಲಿಲ್ಲ. ಬಸ್ತಾರ್ ವಲಯದಲ್ಲಿ ಮಾವೋವಾದಿ ಸಂಘಟನೆಯನ್ನು ಬಲಪಡಿಸಿದ ಪ್ರಮುಖ ನಾಯಕರಲ್ಲಿ ಈತ ಒಬ್ಬ. ತೆಲಂಗಾಣ ಮತ್ತು ಛತ್ತೀಸ್‌ಗಢದ ಗಡಿಭಾಗದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ಮಾವೋವಾದಿ ಬೆಟಾಲಿಯನ್‌ನ ಉಪ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತನನ್ನು ಎರಡನೇ-ಇನ್-ಕಮಾಂಡ್ (Second-in-Command) ಎಂದು ಗುರುತಿಸಲಾಗುತ್ತಿತ್ತು. ಹಿರಿಯ ನಾಯಕ ಬಡಿಸೆ ದೇವಾ ಶರಣಾದ ನಂತರ, ಸಂಘಟನೆಯ ಸಂಪೂರ್ಣ ಜವಾಬ್ದಾರಿ ಕೇಶಲು ಹೆಗಲ ಮೇಲಿತ್ತು. ಈತನ ತಲೆಗೆ ಸರ್ಕಾರ ಬರೋಬ್ಬರಿ 20 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿತ್ತು.
ಶರಣಾದ ನಕ್ಸಲರ ಗುಂಪಿನಲ್ಲಿ ಕೇವಲ ಕೆಳಹಂತದ ಕಾರ್ಯಕರ್ತರಷ್ಟೇ ಅಲ್ಲದೆ, ವಿಭಾಗೀಯ ಸಮಿತಿ ಸದಸ್ಯರು, ಪ್ರದೇಶ ಸಮಿತಿ ನಾಯಕರು ಮತ್ತು ಪ್ಲಟೂನ್ ಮಟ್ಟದ ಕಮಾಂಡರ್‌ಗಳು ಇದ್ದಾರೆ. ಇವರೆಲ್ಲರೂ ತಾವು ಹೊಂದಿದ್ದ ಮಾರಕಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಸ್ತಾಂತರಿಸಲಾದ ಶಸ್ತ್ರಾಸ್ತ್ರಗಳಲ್ಲಿ ಮಾರಕ ಎಕೆ-47 ರೈಫಲ್‌ಗಳು, ಐಎನ್‌ಎಸ್‌ಎಎಸ್ (INSAS) ರೈಫಲ್‌ಗಳು ಮತ್ತು ಎಸ್‌ಎಲ್‌ಆರ್ (SLR) ರೈಫಲ್‌ಗಳು ಸೇರಿವೆ.
ಕೇಶಲು ನೇತೃತ್ವದ ಈ ತಂಡವು ಕರ್ರೆಗುಟ್ಟ ಬೆಟ್ಟಗಳ ಕಾಡುಗಳಲ್ಲಿ 20 ರಿಂದ 30 ಕೇಡರ್‌ಗಳನ್ನು ಮುನ್ನಡೆಸುತ್ತಿತ್ತು. ದಶಕಗಳಿಂದ ಅರಣ್ಯವಾಸ ಅನುಭವಿಸುತ್ತಿದ್ದ ಈ ಕಾರ್ಯಕರ್ತರು, ಸಂಘಟನೆಯ ಆಂತರಿಕ ಭಿನ್ನಾಭಿಪ್ರಾಯಗಳು, ಸರ್ಕಾರದ ಪುನರ್ವಸತಿ ಯೋಜನೆಗಳು ಮತ್ತು ಪೊಲೀಸ್ ಒತ್ತಡದಿಂದಾಗಿ ಮುಖ್ಯವಾಹಿನಿಗೆ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶರಣಾದ ಕಾರ್ಯಕರ್ತರಲ್ಲಿ ಮಹಿಳೆಯರೂ ಸೇರಿರುವುದು ವಿಶೇಷ.
ಮಾರ್ಚ್ 7 ರಂದು ನಡೆದಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 130 ಮಾವೋವಾದಿಗಳು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿದ್ದರು. ಅಂದು 124 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಕೇಶಲು ತಂಡವು ಶರಣಾಗಿದೆ.





