ನವದೆಹಲಿ, ಜನವರಿ 13: ಬೀದಿ ನಾಯಿಗಳ ಕಡಿತದಿಂದ ಸಂಭವಿಸುವ ಸಾವು ಹಾಗೂ ಗಾಯಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೀದಿ ನಾಯಿ ದಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ತೀರ್ಪು ಸಾರ್ವಜನಿಕ ಸುರಕ್ಷತೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ರಕ್ಷಣೆಯ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠ ಈ ಸಂಬಂಧದ ಪ್ರಕರಣವನ್ನು ವಿಚಾರಣೆ ನಡೆಸಿತ್ತು. ವಿಚಾರಣೆಯ ವೇಳೆ, ಬೀದಿ ನಾಯಿಗಳ ದಾಳಿಯಿಂದ ಸಂಭವಿಸುತ್ತಿರುವ ಮರಣಗಳು ಮತ್ತು ಗಂಭೀರ ಗಾಯಗಳ ಬಗ್ಗೆ ನ್ಯಾಯಾಲಯ ಗಂಭೀರ ಕಳವಳ ವ್ಯಕ್ತಪಡಿಸಿತು. “ಮಕ್ಕಳು ಮತ್ತು ವೃದ್ಧರು ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿದ್ದರೆ, ಇದರ ಹೊಣೆ ಯಾರು?” ಎಂದು ನ್ಯಾಯಪೀಠ ಪ್ರಶ್ನಿಸಿತ್ತು.
ವಿಚಾರಣೆಯ ವೇಳೆ 9 ವರ್ಷದ ಮಗುವಿನ ಸಾವಿನ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, “ನಾಯಿ ಪ್ರಿಯರ ಸಂಘಟನೆಗಳು ಅಥವಾ ಬೀದಿನಾಯಿಗಳನ್ನು ಪೋಷಿಸುವವರು ಇದ್ದಾಗಲೂ ಒಂದು ಮಗು ಸಾವನ್ನಪ್ಪಿದರೆ, ಅದರ ಹೊಣೆಗಾರಿಕೆ ಯಾರು ಹೊರುತ್ತಾರೆ?” ಎಂದು ತೀವ್ರವಾಗಿ ಪ್ರಶ್ನಿಸಿತ್ತು. ಇಂತಹ ಘಟನೆಗಳಾಗುತ್ತಿದ್ದರೂ ಕಣ್ಣುಮುಚ್ಚಿ ಸುಮ್ಮನಿರಬೇಕೇ ಎಂದು ನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳತ್ತ ಪ್ರಶ್ನೆ ಮಾಡಿತ್ತು.
ನ್ಯಾಯಪೀಠವು ಕೇವಲ ಪ್ರಾಣಿಗಳ ಮೇಲಷ್ಟೇ ಕನಿಕರ ತೋರಿಸುವ ಮನೋಭಾವವನ್ನು ಪ್ರಶ್ನಿಸಿದೆ. “ನಾಯಿಗಳ ಮೇಲಿನ ದಯೆ ಬಗ್ಗೆ ಮಾತನಾಡುವವರು, ಮಾನವರ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತು ಏಕೆ ಮೌನವಾಗಿದ್ದಾರೆ?” ಎಂದು ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಮಾನವನ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂಬುದನ್ನು ನ್ಯಾಯಪೀಠ ತಿಳಿಸಿದೆ.
ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ, ಬೀದಿ ನಾಯಿ ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಗಾಯಗಳಿಗೆ ರಾಜ್ಯ ಸರ್ಕಾರಗಳು ಪರಿಹಾರ ಪಾವತಿಸುವ ಜವಾಬ್ದಾರಿ ಹೊಂದಿವೆ. ಜೊತೆಗೆ, ನಾಯಿ ಮಾಲೀಕರು ಹಾಗೂ ಬೀದಿ ನಾಯಿಗಳನ್ನು ಪ್ರತಿನಿಧಿಸುವ ಅಥವಾ ಪೋಷಿಸುವ ಸಂಸ್ಥೆಗಳ ಮೇಲೆಯೂ ಹೊಣೆಗಾರಿಕೆ ನಿಗದಿಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ. ಅಗತ್ಯವಿದ್ದಲ್ಲಿ ಕಠಿಣ ಜವಾಬ್ದಾರಿ ಚೌಕಟ್ಟು ರೂಪಿಸುವ ಬಗ್ಗೆ ನ್ಯಾಯಪೀಠ ಸೂಚನೆ ನೀಡಿದೆ.
ಇದೇ ವೇಳೆ, ಬೀದಿ ನಾಯಿಗಳಿಗೆ ಆಹಾರ ನೀಡುವ ವಿಚಾರದಲ್ಲಿಯೂ ನ್ಯಾಯಾಲಯ ಸ್ಪಷ್ಟ ಮಾರ್ಗಸೂಚಿ ನೀಡಿದೆ. “ಯಾರಾದರೂ ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸಿದರೆ, ಅವರು ಅದನ್ನು ತಮ್ಮ ಸ್ವಂತ ಆವರಣದಲ್ಲಿ ಅಥವಾ ಮನೆಯೊಳಗೇ ಮಾಡಬೇಕು. ಸಾರ್ವಜನಿಕ ರಸ್ತೆಗಳು ಮತ್ತು ಬೀದಿಗಳನ್ನು ನಾಯಿಗಳಿಗೆ ಬಿಡುವುದು ಸರಿಯಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.





