ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಮಾರಂಭವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮದಲ್ಲಿದ್ದ ಜನರ ನಡುವೆಯೇ ಗುಂಡಿನ ಸದ್ದು ಕೇಳಿಬಂದಿದ್ದು, 26 ವರ್ಷದ ಯುವತಿಯೊಬ್ಬರು ಬಲಿಯಾಗಿದ್ದಾರೆ.
ಶಿಮ್ಲಾದ ರೋಹ್ರು ಉಪವಿಭಾಗದ ಕುಲ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ದೇವತೆಯ ಹೊಸ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ‘ಭಾಯಿ-ಭಾಯಿ ಮಿಲನ್’ ಎಂಬ ವಿಶೇಷ ಆಚರಣೆ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಸಾಂಪ್ರದಾಯಿಕ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿದ್ದಾಗ, ಏಕಾಏಕಿ ಆರೋಪಿಗಳು ಗುಂಡು ಹಾರಿಸಿದ್ದಾರೆ. ಈ ಗುಂಡು ಹಳ್ಳಿಯ ನಿವಾಸಿ ರಿತಿಕಾ (26) ಎಂಬುವವರಿಗೆ ನೇರವಾಗಿ ತಗುಲಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಆರೋಪಿಗಳ ಬಂಧನ ಮತ್ತು ತನಿಖೆ :
ಘಟನೆ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ರೋಹ್ರು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ತೀವ್ರ ಶೋಧ ನಡೆಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಗನ್ ವಶಪಡಿಸಿಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು : ರಜತ್ ಸೋಹ್ತಾ (28) ಮತ್ತು ಅಮಿತ್ ಅಲಿಯಾಸ್ ರೋಹಿತ್ ಭಾಪ್ತಾ (32).
ಕಾನೂನು ಕ್ರಮ :
ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103 (1) (ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಭ್ರಮದ ವಾತಾವರಣವಿದ್ದ ದೇವಸ್ಥಾನದ ಆವರಣ ಈಗ ಸ್ಮಶಾನ ಮೌನಕ್ಕೆ ಶರಣಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





