ಶಿಮ್ಲಾದಲ್ಲಿ ಮಹಿಳೆಯ ಮೇಲೆ ಗುಂಡಿನ ದಾಳಿ, ಇಬ್ಬರ ಬಂಧನ!

BeFunky collage (57)

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಮಾರಂಭವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮದಲ್ಲಿದ್ದ ಜನರ ನಡುವೆಯೇ ಗುಂಡಿನ ಸದ್ದು ಕೇಳಿಬಂದಿದ್ದು, 26 ವರ್ಷದ ಯುವತಿಯೊಬ್ಬರು ಬಲಿಯಾಗಿದ್ದಾರೆ.

ಶಿಮ್ಲಾದ ರೋಹ್ರು ಉಪವಿಭಾಗದ ಕುಲ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ದೇವತೆಯ ಹೊಸ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ‘ಭಾಯಿ-ಭಾಯಿ ಮಿಲನ್’ ಎಂಬ ವಿಶೇಷ ಆಚರಣೆ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಸಾಂಪ್ರದಾಯಿಕ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿದ್ದಾಗ, ಏಕಾಏಕಿ ಆರೋಪಿಗಳು ಗುಂಡು ಹಾರಿಸಿದ್ದಾರೆ. ಈ ಗುಂಡು ಹಳ್ಳಿಯ ನಿವಾಸಿ ರಿತಿಕಾ (26) ಎಂಬುವವರಿಗೆ ನೇರವಾಗಿ ತಗುಲಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಆರೋಪಿಗಳ ಬಂಧನ ಮತ್ತು ತನಿಖೆ :

ಘಟನೆ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ರೋಹ್ರು ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ತೀವ್ರ ಶೋಧ ನಡೆಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಗನ್ ವಶಪಡಿಸಿಕೊಂಡಿದ್ದು, ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು : ರಜತ್ ಸೋಹ್ತಾ (28) ಮತ್ತು ಅಮಿತ್ ಅಲಿಯಾಸ್ ರೋಹಿತ್ ಭಾಪ್ತಾ (32).

ಕಾನೂನು ಕ್ರಮ :

ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103 (1) (ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಭ್ರಮದ ವಾತಾವರಣವಿದ್ದ ದೇವಸ್ಥಾನದ ಆವರಣ ಈಗ ಸ್ಮಶಾನ ಮೌನಕ್ಕೆ ಶರಣಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version