ಜಾಲೋರ್: ಇಡೀ ಪ್ರಪಂಚವು ಇಂದು ಹೈ-ಸ್ಪೀಡ್ 5G ಮತ್ತು 6G ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. ಆದರೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಭಿನ್ಮಲ್ ಪ್ರದೇಶದ ಸುಮಾರು 15 ಹಳ್ಳಿಗಳಲ್ಲಿ, ಇಲ್ಲಿನ ಚೌಧರಿ ಸಮುದಾಯದ ಪಂಚಾಯತ್ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸ್ಮಾರ್ಟ್ಫೋನ್ ಬಳಸುವುದನ್ನು ನಿಷೇಧಿಸಿ ಎಂದು ಆದೇಶ ಹೊರಡಿಸಿದೆ. ಈ ನಿಯಮವು ಮುಂಬರುವ ಜನವರಿ 26 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಘಾಜಿಪುರ ಗ್ರಾಮದಲ್ಲಿ ನಡೆದ ಸುಂಧಮಾತಾ ಪಟ್ಟಿ ಪಂಚಾಯತ್ನ 14 ಪಟ್ಟಿ ಸಮುದಾಯದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಪಂಚಾಯತ್ ಸದಸ್ಯರೊಬ್ಬರು ಈ ನಿಯಮದ ಅಗತ್ಯವನ್ನು ವಿವರಿಸುತ್ತಿದ್ದಾರೆ.
ಮಹಿಳೆಯರು ಸ್ಮಾರ್ಟ್ಫೋನ್ ಬಳಸುವುದರಿಂದ ಮಕ್ಕಳು ಪದೇ ಪದೇ ಆ ಪೋನ್ಗಲನ್ನ ಆಟವಾಡಲು ಬಳಸುತ್ತಾರೆ, ಇದು ಅವರ ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರು ಮತ್ತು ಯುವತಿಯರು ಮೊಬೈಲ್ ವ್ಯಸನಕ್ಕೆ (Mobile Addiction) ಒಳಗಾಗಬಾರದು ಎಂಬುದು ಪಂಚಾಯತ್ನ ಉದ್ದೇಶವಾಗಿದೆ. ಸ್ಮಾರ್ಟ್ಫೋನ್ಗಳು ಮತ್ತು ಸೋಷಿಯಲ್ ಮೀಡಿಯಾಗಳು ಸಮುದಾಯದ ಸಂಸ್ಕೃತಿಯನ್ನು ಹಾಳುಮಾಡುತ್ತಿವೆ ಎಂಬುದು ಇವರ ವಾದ.
ಸುಜನರಾಮ್ ಚೌಧರಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 15 ಹಳ್ಳಿಗಳ ಸೊಸೆಯಂದಿರು ಮತ್ತು ತರುಣಿಯರಿಗೆ ಈ ನಿಯಮ ಅನ್ವಯಿಸಲಿದೆ. ಸಭೆಯಲ್ಲಿ ತಿಳಿಸಲಾದ ನಿಯಮಗಳೆಂದರೆ, ಮಹಿಳೆಯರು ಕ್ಯಾಮೆರಾ ಇರುವ ಯಾವುದೇ ಸ್ಮಾರ್ಟ್ಫೋನ್ ಬಳಸುವಂತಿಲ್ಲ. ಅಗತ್ಯವಿದ್ದರೆ ಕೇವಲ ಕರೆ ಮಾಡಲು ಕ್ಯಾಮೆರಾ ಇಲ್ಲದ ಕೀಪ್ಯಾಡ್ ಫೋನ್ ಬಳಸಬಹುದು. ಮದುವೆಗಳು, ಸಾಮಾಜಿಕ ಕೂಟಗಳು ಅಥವಾ ನೆರೆಹೊರೆಯವರ ಮನೆಗೆ ಹೋಗುವಾಗಲೂ ಮಹಿಳೆಯರು ಫೋನ್ ಕೊಂಡೊಯ್ಯಲು ಇನ್ನು ಮುಂದೆ ಅವಕಾಶವಿಲ್ಲ. ಕಾಲೇಜು ಅಥವಾ ಶಾಲೆಗೆ ಹೋಗುವ ಹೆಣ್ಣುಮಕ್ಕಳು ಶಿಕ್ಷಣದ ಕಾರಣಕ್ಕಾಗಿ ಮನೆಯೊಳಗೆ ಮಾತ್ರ ಸ್ಮಾರ್ಟ್ಫೋನ್ ಬಳಸಬಹುದು. ಆದರೆ ಅದನ್ನು ಮನೆಯಿಂದ ಹೊರಗೆ ತರುವಂತಿಲ್ಲ ಎಂದು ತಿಳಿಸಲಾಗಿದೆ.
ನಿಯಮ ಜಾರಿಯಾಗಲಿರುವ ಪ್ರಮುಖ ಹಳ್ಳಿಗಳು: ಈ ಕಠಿಣ ನಿಯಮವನ್ನು ಗಾಜಿಪುರ್, ಪಾವಲಿ, ಕಲ್ದಾ, ಮನೋಜಿಯವಾಸ್, ರಾಜಿಕಾವಾಸ್, ದತ್ಲವಾಸ್, ರಾಜಪುರ, ಕೋಡಿ, ಸಿದ್ರೋಡಿ, ಅಲ್ದಿ, ರೋಪ್ಸಿ, ಖಾನದೇವಾಲ್, ಸವಿಧರ್, ಹತ್ಮಿ ಕಿ ಧನಿ ಮತ್ತು ಖಾನ್ಪುರ್ ಗ್ರಾಮಗಳಲ್ಲಿ ಜಾರಿಗೊಳಿಸಲಾಗುತ್ತಿದೆ.
ಪಂಚಾಯತ್ನ ಈ ಸರ್ವಾಧಿಕಾರಿ ಧೋರಣೆಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳಾ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು 21ನೇ ಶತಮಾನದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ. ಮಕ್ಕಳ ಕಣ್ಣು ಕೆಡುತ್ತದೆ ಎಂಬ ನೆಪದಲ್ಲಿ ಕೇವಲ ಮಹಿಳೆಯರ ಮೇಲೆ ನಿಷೇಧ ಹೇರುವುದು ಎಷ್ಟು ಸರಿ ? ಪುರುಷರಿಗೂ ಈ ನಿಯಮ ಅನ್ವಯವಾಗಬೇಡವೇ ? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ತಂತ್ರಜ್ಞಾನದ ಬಳಕೆಯನ್ನು ಸಮರ್ಪಕವಾಗಿ ಕಲಿಸುವ ಬದಲು, ಸಂಪೂರ್ಣ ನಿಷೇಧ ಹೇರುವುದು ಮಹಿಳೆಯರ ಪ್ರಗತಿಗೆ ಮಾರಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಂದೆಡೆ ಸರ್ಕಾರವು ಹೆಣ್ಣುಮಕ್ಕಳಿಗೆ ಡಿಜಿಟಲ್ ಶಿಕ್ಷಣ ಮತ್ತು ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದರೆ, ಮತ್ತೊಂದೆಡೆ ಪಂಚಾಯತ್ಗಳು ಇಂತಹ ವಿಲಕ್ಷಣ ನಿಯಮಗಳ ಮೂಲಕ ಅವರನ್ನು ಹಿಂದಕ್ಕೆ ತಳ್ಳುತ್ತಿವೆ. ಈ ಕುರಿತು ಜಿಲ್ಲಾಡಳಿತ ಅಥವಾ ಸರ್ಕಾರ ಮಧ್ಯಪ್ರವೇಶಿಸಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.





