ಮೊಹರಂ ಇಸ್ಲಾಂ ಧರ್ಮದ ಮೊದಲ ತಿಂಗಳಾಗಿದ್ದು, ಇದೇ ತಿಂಗಳಿಂದ ಹೊಸ ಇಸ್ಲಾಮಿಕ್ ವರ್ಷ ಆರಂಭವಾಗುತ್ತದೆ. ಧಾರ್ಮಿಕ ಮಹತ್ವ ಹೊಂದಿರುವ ಈ ಸಂದರ್ಭದಲ್ಲಿ ದೇಶದಾದ್ಯಂತ ಮುಸ್ಲಿಂ ಸಮುದಾಯ ವಿಶೇಷ ಪ್ರಾರ್ಥನೆಗಳು ಹಾಗೂ ಪುಣ್ಯದ ಕಾರ್ಯಗಳಲ್ಲಿ ತೊಡಗಿರುತ್ತದೆ. ಇಂತಹ ಸಂದರ್ಭದಲ್ಲಿ ಮುಂಬೈನಲ್ಲಿ ಭಾರೀ ದುರಂತಕ್ಕೆ ಕಾರಣವಾಗಬಹುದಾಗಿದ್ದ ಸಾಮೂಹಿಕ ವಿಷಪ್ರಾಶನ ಸಂಚುವನ್ನು ಪೊಲೀಸರು ಭೇದಿಸಿದ್ದಾರೆ.
ವಿಷಕಾರಿ ಕ್ಯಾಪ್ಸೂಲ್ ಹಂಚಲು ಸಂಚು
ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರನ್ನು ಗುರಿಯಾಗಿಸಿಕೊಂಡು ಶಂಕಿತ ವ್ಯಕ್ತಿಯೊಬ್ಬ ವಿಷಕಾರಿ ಜಿಂಕ್ ಫಾಸ್ಫೈಡ್ ತುಂಬಿದ ಕ್ಯಾಪ್ಸೂಲ್‌ಗಳನ್ನು ವಿತರಿಸಲು ಯೋಜನೆ ರೂಪಿಸಿದ್ದಾನೆ. ಆರೋಪಿಯ ಸಂಚು ಯಶಸ್ವಿಯಾಗಿದ್ದರೆ ಸಾವಿರಾರು ಜನರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ವಸ್ಥ ವ್ಯಕ್ತಿಯಿಂದ ಬಯಲಾದ ಪ್ರಕರಣ
ಸಲ್ಮಾನ್ ಸಯ್ಯದ್ ಎಂಬ ವ್ಯಕ್ತಿ ಒಂದು ಕ್ಯಾಪ್ಸೂಲ್ ಸೇವಿಸಿದ ಬಳಿಕ ವಾಂತಿ ಮತ್ತು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತು. ಈ ಘಟನೆ ಕುರಿತು ತನಿಖೆ ಆರಂಭಿಸಿದಾಗ ಸಾಮೂಹಿಕ ವಿಷಪ್ರಾಶನ ಸಂಚು ಬೆಳಕಿಗೆ ಬಂದಿದೆ.
14,900 ವಿಷದ ಕ್ಯಾಪ್ಸೂಲ್ ವಶ
ಡಿಸಿಪಿ ಜಯಂತ್ ಮೀನಾ ಅವರ ಮಾಹಿತಿ ಪ್ರಕಾರ, ಮೊಹರಂ ಮೆರವಣಿಗೆ ವೇಳೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಔಷಧಿಯ ಮಾದರಿಯ ಕ್ಯಾಪ್ಸೂಲ್‌ಗಳನ್ನು ಜನರಿಗೆ ಹಂಚುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ 14,900 ಜಿಂಕ್ ಫಾಸ್ಫೈಡ್ ತುಂಬಿದ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ ಆರೋಪಿಯ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೇರಿದಂತೆ ಹಲವು ದಾಖಲೆಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕ್ಯಾಪ್ಸೂಲ್‌ಗಳನ್ನು ಜನರಿಗೆ ಹಂಚುವ ಮೊದಲು ಆರೋಪಿಯನ್ನು ಬಂಧಿಸಿರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
30 ಸಾವಿರ ಕ್ಯಾಪ್ಸೂಲ್ ತಯಾರಿಸುವ ಉದ್ದೇಶ
ತನಿಖೆಯಲ್ಲಿ ಆರೋಪಿಯು ಸುಮಾರು 50 ಕೆಜಿ ಜಿಂಕ್ ಫಾಸ್ಫೈಡ್ ಖರೀದಿಸಿದ್ದಾನೆ ಎಂಬುದು ಗೊತ್ತಾಗಿದೆ. ತನ್ನ ಮನೆಯಲ್ಲೇ ಪ್ರತಿ ಕ್ಯಾಪ್ಸೂಲ್‌ಗೆ ಸುಮಾರು 1 ಗ್ರಾಂ ವಿಷ ತುಂಬಿ ಒಟ್ಟು 30,000 ಕ್ಯಾಪ್ಸೂಲ್‌ಗಳನ್ನು ತಯಾರಿಸುವ ಉದ್ದೇಶ ಹೊಂದಿದ್ದನು. ಈಗಾಗಲೇ 14,900 ಕ್ಯಾಪ್ಸೂಲ್‌ಗಳನ್ನು ಸಿದ್ಧಪಡಿಸಿ ಅವುಗಳನ್ನು ವಿತರಿಸಲು ಯೋಜನೆ ರೂಪಿಸಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆರೋಪಿ ಯಾರು?
ಬಂಧಿತನನ್ನು ಪುಣೆಯ ವಿಮಾನನಗರ ನಿವಾಸಿ ಫಯಾಜ್ ಪ್ರೇಮ್‌ಜಿ ಎಂದು ಗುರುತಿಸಲಾಗಿದೆ. ಬಿಬಿಎ ಪದವಿ ಪಡೆದಿರುವ ಫಯಾಜ್, ಪೇಂಟ್ ವ್ಯವಹಾರ ನಡೆಸುತ್ತಿದ್ದನು. ಸುಮಾರು 15 ದಿನಗಳ ಹಿಂದೆ ಮುಂಬೈನ ಡೋಂಗ್ರಿಯಲ್ಲಿ ಮನೆ ಬಾಡಿಗೆ ಪಡೆದು ಅಲ್ಲೇ ತಂಗಿ ಈ ಸಂಚು ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇರಾನ್ ಮತ್ತು ಇರಾಕ್ ಪ್ರವಾಸದ ತನಿಖೆ
2025ರಲ್ಲಿ ಫಯಾಜ್ ಇರಾನ್ ಹಾಗೂ ಇರಾಕ್‌ಗೆ ಭೇಟಿ ನೀಡಿದ್ದ ವಿಚಾರವೂ ತನಿಖೆಯಲ್ಲಿ ಬಹಿರಂಗವಾಗಿದೆ. ಆ ದೇಶಗಳಿಗೆ ತೆರಳಿದ್ದ ಉದ್ದೇಶ ಏನು ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ತನಿಖೆ ಮುಂದುವರಿಕೆ
ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಆರೋಪಿಯ ಹಿನ್ನೆಲೆ, ಸಂಚಿನ ಉದ್ದೇಶ ಹಾಗೂ ಇದರಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.





