ಮಹಾರಾಷ್ಟ್ರ (ಆಗಸ್ಟ್ 03): ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ ಪ್ರವಾಹದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪ್ರಸ್ತುತ ಕೃಷ್ಣಾ ನದಿಗೆ ಸುಮಾರು 1.23 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ–ಉಗಾರಖುರ್ದ್ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರವಾಹದ ಪರಿಣಾಮ ಜಮಖಂಡಿ–ಮೀರಜ್ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಪ್ರತಿದಿನ ನೂರಾರು ಬಸ್‌ಗಳು, ಲಾರಿಗಳು ಹಾಗೂ ಇತರೆ ವಾಹನಗಳು ಸಂಚರಿಸುವ ಈ ಪ್ರಮುಖ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಸುಮಾರು 50 ಕಿಲೋಮೀಟರ್ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ವ್ಯಾಪಾರ ವಹಿವಾಟಿಗೂ ತೊಂದರೆ ಉಂಟಾಗಿದೆ.
ಸುರಕ್ಷತಾ ದೃಷ್ಟಿಯಿಂದ ಕುಡಚಿ ಪೊಲೀಸರು ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಪ್ರವಾಹ ನೀರಿನ ವೇಗ ಹೆಚ್ಚಿರುವುದರಿಂದ ಯಾರೂ ಸೇತುವೆ ದಾಟಲು ಯತ್ನಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ಇಲಾಖೆ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಇನ್ನೂ ಮಳೆಯ ಸಾಧ್ಯತೆ ಇರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.




