ತಿರುವನಂತಪುರಂ (ಆ.3): ದೇವರನಾಡು ಕೇರಳಂನಲ್ಲಿ ಭಾರಿ ಮಳೆಯಿಂದ ಸಾಲು ಸಾಲು ಅನಾಹುತಗಳು ಸಂಭವಿಸಿದ್ದು, ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಈವರೆಗೆ 15 ಜನರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಅವಾಂತರ ಸೃಷ್ಟಿಯಾಗಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಿಳಿಸಿದ್ದಾರೆ. ಸರ್ಕಾರವು ರಾಜ್ಯಾದ್ಯಂತ 316 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಇದುವರೆಗೂ 11,018 ಜನರಿಗೆ ಆಶ್ರಯ ನೀಡಲಾಗಿದೆ.
ಜಿಲ್ಲಾವಾರು ಸಾವಿನ ಅಂಕಿಅಂಶಗಳು
ಕೇರಳಂನ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಮಳೆಯಿಂದ ಜೀವಹಾನಿ ಸಂಭವಿಸಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 3 ಜನರು ಸಾವನ್ನಪ್ಪಿದ್ದು, ಮೃತರ ಪೈಕಿ ಒಂದು ಸಣ್ಣ ಮಗುವೂ ಸೇರಿದೆ. ಕೊಟ್ಟಾಯಂನಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಪೂಂಜಾರ್ ವಿಧಾನಸಭಾ ಕ್ಷೇತ್ರದವರಾಗಿದ್ದಾರೆ.
ಎರ್ನಾಕುಲಂ ಜಿಲ್ಲೆಯಲ್ಲಿ ಇಬ್ಬರು, ಇಡುಕ್ಕಿ ಮತ್ತು ಮೂವಾಟ್ಟುಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರು, ಕೊಲ್ಲಂನಲ್ಲಿ 2, ಮಲಪ್ಪುರಂನಲ್ಲಿ 4, ಕಣ್ಣೂರಿನಲ್ಲಿ ಒಬ್ಬರು ಮತ್ತು ಕೋಝಿಕ್ಕೋಡ್ನಿಂದಲೂ ಒಂದು ಸಾವು ವರದಿಯಾಗಿದೆ. ಒಟ್ಟು 15 ಜನರು ಮೃತಪಟ್ಟಿದ್ದಾರೆ.
ನಾಪತ್ತೆಯಾದವರ ಮಾಹಿತಿ
ಮಳೆ ಮತ್ತು ಪ್ರವಾಹದಲ್ಲಿ 7 ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರಲ್ಲಿ ಇಬ್ಬರು ಕೊಲ್ಲಂ, ಇಬ್ಬರು ಕಣ್ಣೂರು, ಒಬ್ಬರು ಮಲಪ್ಪುರಂ, ಇಡುಕ್ಕಿ ಮತ್ತು ಮೂವಾಟ್ಟುಪುಳದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಕೊಲ್ಲಂನಿಂದ ಚೆಂಗನ್ನೂರಿನವರೆಗೆ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ಸುಲೂರ್ನಿಂದ ಬಂದಿರುವ ಎರಡು ಹೆಲಿಕಾಪ್ಟರ್‌ಗಳನ್ನು ವೈಮಾನಿಕ ಕಾರ್ಯಾಚರಣೆಗಾಗಿ ತಿರುವನಂತಪುರಂನಲ್ಲಿ ಸಜ್ಜಾಗಿಡಲಾಗಿದೆ.
ತೀವ್ರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ಅರಕ್ಕೋಣಂನಿಂದ ಹೆಚ್ಚುವರಿ ಪಡೆಯನ್ನು ಕರೆಸಲಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಕ್ಷಣಾ ಭದ್ರತಾ ಪಡೆಯನ್ನು (DSC) ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪರಿಹಾರ ಘೋಷಣೆ
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮೃತರ ಕುಟುಂಬಕ್ಕೆ ತಲಾ 8 ಲಕ್ಷ ರೂ. ಪರಿಹಾರ ಹಾಗೂ ಶವಸಂಸ್ಕಾರದ ವೆಚ್ಚಕ್ಕಾಗಿ ತಕ್ಷಣವೇ 10,000 ರೂ. ಒದಗಿಸುವುದಾಗಿ ಘೋಷಿಸಿದ್ದಾರೆ. ಭೂಕುಸಿತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಹಣವನ್ನು 10 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರಿಗೆ ಅಗತ್ಯ ಕುಡಿಯುವ ನೀರು, ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಹವಾಮಾನ ಎಚ್ಚರಿಕೆ
ಈ ನಡುವೆ ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 3 ಮತ್ತು ಆಗಸ್ಟ್ 6ರಂದು ಕೇರಳಂನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಗಾಳಿಯ ವೇಗ ಗಂಟೆಗೆ 50 ಕಿ.ಮೀ.ವರೆಗೆ ತಲುಪಬಹುದು ಎಂದು ಮಾಹಿತಿ ನೀಡಿದೆ. ಜನರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.
ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆ
ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಕಡಲ ಕೊರೆತ ಹೆಚ್ಚಿರಲಿದ್ದು, ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತಲುಪಬಹುದು ಎಂದು ಎಚ್ಚರಿಕೆ ನೀಡಲಾಗಿದೆ.





