ನವದೆಹಲಿ (ಜುಲೈ 27): ಪ್ರತಿಭಟನೆಗಳಲ್ಲಿ ಭಾಗವಹಿಸಿ ಕಾನೂನು ಕ್ರಮಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರಿಗೆ ನೆರವಾಗುವ ಉದ್ದೇಶದಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಕಾನೂನು ನೆರವು ನಿಧಿ (Legal Aid Fund) ಸಂಗ್ರಹಿಸಲು ಹಾಗೂ ದೇಶದ ವಿವಿಧ ಭಾಗಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವವರಿಗೆ ವಕೀಲರ ನೆರವು ಕಲ್ಪಿಸಲು ಕಾಕ್ರೋಚ್ ಜನತಾ ಪಾರ್ಟಿ ವಿಶೇಷ ವೆಬ್‌ಸೈಟ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಇಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಪಿಲ್ ಸಿಬಲ್, ಈ ವೆಬ್‌ಸೈಟ್ ಮೂಲಕ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುವುದು. ಜೊತೆಗೆ, ಅವರಿಗೆ ಸೂಕ್ತ ಕಾನೂನು ನೆರವು ಒದಗಿಸಲು ದೇಶಾದ್ಯಂತ ಇರುವ ವಕೀಲರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
My Press Conference with leaders of CJP on giving legal aid to protestors who are being unjustly targeted.
Full Video link 👇https://t.co/pWXRhWfOvf pic.twitter.com/IAmNprJ0i7
— Kapil Sibal (@KapilSibal) July 27, 2026
ಕಾನೂನು ನೆರವು ನಿಧಿಗೆ ತಮ್ಮ ವೈಯಕ್ತಿಕವಾಗಿ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ ಕಪಿಲ್ ಸಿಬಲ್, ದೇಶದ ವಿವಿಧ ಭಾಗಗಳ ವಕೀಲರು ಸಹ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು. ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಅನಗತ್ಯ ಕಾನೂನು ಕ್ರಮ ಕೈಗೊಳ್ಳಬಾರದು ಎಂಬುದು ನಮ್ಮ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.
ಈ ವೆಬ್‌ಸೈಟ್‌ನಲ್ಲಿ ಯಾವ ಪ್ರದೇಶದಲ್ಲಿ ಯಾವ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ, ಅವರಿಗೆ ಯಾವ ರೀತಿಯ ಕಾನೂನು ನೆರವು ಅಗತ್ಯವಿದೆ ಹಾಗೂ ಯಾವ ವಕೀಲರು ನೆರವು ನೀಡಲು ಸಿದ್ಧರಿದ್ದಾರೆ ಎಂಬ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಉಚಿತ ಕಾನೂನು ಸೇವೆ ನೀಡಲು ಆಸಕ್ತ ವಕೀಲರು ತಮ್ಮ ಹೆಸರು, ಸ್ಥಳ ಹಾಗೂ ಸೇವೆಯ ವಿವರಗಳನ್ನು ನೋಂದಾಯಿಸಿಕೊಳ್ಳುವ ವ್ಯವಸ್ಥೆಯೂ ಇರಲಿದೆ.
ಇನ್ನು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಜುಲೈ 25ರಂದು 37 ದಿನಗಳ ಪ್ರತಿಭಟನೆಯನ್ನು ಹಿಂಪಡೆಯುವ ಮೊದಲು ಕಪಿಲ್ ಸಿಬಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿತ್ತು ಎಂದು ತಿಳಿಸಿದರು. ಪ್ರತಿಭಟನೆ ಮುಗಿದ ಬಳಿಕ ಪ್ರತ್ಯೇಕವಾಗಿ ಪ್ರತಿಭಟನಾಕಾರರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಸಾಧ್ಯತೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಇದೇ ಕಾರಣದಿಂದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗಿತ್ತು ಎಂದರು.
ಸಿಜೆಪಿ ರೂಪಿಸುತ್ತಿರುವ ಈ ಕಾನೂನು ನೆರವು ವೇದಿಕೆ, ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರಿಗೆ ತ್ವರಿತ ಕಾನೂನು ಸಹಾಯ, ವಕೀಲರ ಸಂಪರ್ಕ ಮತ್ತು ಆರ್ಥಿಕ ನೆರವು ಒದಗಿಸುವ ಉದ್ದೇಶ ಹೊಂದಿದೆ ಎಂದು ಪಕ್ಷ ತಿಳಿಸಿದೆ





