ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಭರಣಗಳು, ವಸ್ತ್ರಗಳು, ಹಾಗೂ ಬೇರೆ ಅನೇಕ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಸಂಬಂಧ ತಮಿಳುನಾಡು ಪೊಲೀಸರು ಮತ್ತು ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದು, ಬಿಗಿ ಭದ್ರತೆ ನಡುವೆ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ.
ಹಸ್ತಾಂತರ ಪ್ರಕ್ರಿಯೆಯ ವಿವರ
ಇಂದು (ಫೆಬ್ರವರಿ 14) ಮತ್ತು ನಾಳೆ (ಫೆಬ್ರವರಿ 15) ನಡೆಯುವ ಈ ಹಸ್ತಾಂತರ ಪ್ರಕ್ರಿಯೆಯಲ್ಲಿ, ಜಯಲಲಿತಾ ಅವರ ಅಪಾರ ಆಭರಣಗಳು ಹಾಗೂ ವಸ್ತ್ರಗಳು ತಮಿಳುನಾಡು ಸರ್ಕಾರಕ್ಕೆ ನೀಡಲಾಗುತ್ತಿದೆ. ಈ ವಸ್ತುಗಳಲ್ಲಿ ಪ್ರಮುಖವಾದವುಗಳು
- 11,344 ರೇಷ್ಮೆ ಸೀರೆಗಳು
- 7040 ಗ್ರಾಂ ತೂಕದ 468 ಬಗೆಯ ಚಿನ್ನ
- ವಜ್ರಖಚಿತ ಆಭರಣಗಳು
- 700 ಕೆ.ಜಿ ಬೆಳ್ಳಿ ಆಭರಣಗಳು
- 750 ಜೊತೆ ಚಪ್ಪಲಿಗಳು
- 250 ಶಾಲುಗಳು
- 12 ರೆಫ್ರಿಜರೇಟರ್, 10 ಟಿವಿ ಸೆಟ್, 8 VCR, 1 ವಿಡಿಯೋ ಕ್ಯಾಮರಾ
- 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್-ಒನ್ ಟೇಪ್ ರೆಕಾರ್ಡರ್
- 1040 ವಿಡಿಯೋ ಕ್ಯಾಸೆಟ್ ಮತ್ತು 3 ಐರನ್ ಲಾಕರ್‌ಗಳು
ಜಯಲಲಿತಾ ಸಂಬಂಧಿಕರಿಂದ ತಕರಾರು
ಜಯಲಲಿತಾ ಅವರ ಸಂಬಂಧಿಕರಾಗಿರುವ ದೀಪಾ ಮತ್ತು ದೀಪಕ್ ಅವರು, ಆಭರಣಗಳನ್ನು ನಮಗೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅವರ ಮೇಲ್ಮನವಿಯನ್ನು ವಜಾಗೊಳಿಸಿದ್ದು, ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆ
2014ರಲ್ಲಿ ವಿಶೇಷ ನ್ಯಾಯಾಲಯ ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ₹100 ಕೋಟಿ ದಂಡ ವಿಧಿಸಿತ್ತು. ಈ ಪ್ರಕರಣದ ಭಾಗವಾಗಿ ಮುಟ್ಟುಗೋಲು ಹಾಕಿದ್ದ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ವಿಶೇಷ ನ್ಯಾಯಾಲಯ 2024ರ ಫೆಬ್ರವರಿ 19ರಂದು ದಿನಾಂಕ ನಿಗದಿಪಡಿಸಿತ್ತು. ಈಗ, ಈ ಆದೇಶವನ್ನು ಅನುಸರಿಸಿ ಹಸ್ತಾಂತರ ಪ್ರಕ್ರಿಯೆ ಮುಗಿಯುತ್ತಿದೆ.