ಭೋಪಾಲ್: ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಗರದ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಕೇವಲ 6 ತಿಂಗಳ ಹಸುಗೂಸು ಮೃತಪಟ್ಟಿದ್ದು, ಈ ಮೂಲಕ ನೀರಿನ ವಿಷಾಹಾರ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
10 ವರ್ಷಗಳ ಕಾಯುವಿಕೆಯ ನಂತರ ಸಿಕ್ಕ ಮಗು ಮಸಣಕ್ಕೆ
ದಂಪತಿಗೆ ಮದುವೆಯಾಗಿ 10 ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಹತ್ತು ವರ್ಷಗಳ ನಿರಂತರ ಪ್ರಾರ್ಥನೆ ಮತ್ತು ಹರಕೆಯ ಫಲವಾಗಿ ಈ ಗಂಡು ಮಗು ಜನಿಸಿತ್ತು. ಆದರೆ, ಆ ಮಗುವೂ ಕುಲುಷಿತ ನೀರಿನಿಂದ ಕೇವಲ 6 ತಿಂಗಳಲ್ಲೇ ಸಾವನ್ನಪ್ಪಿದೆ. ಮನೆಗೆ ಪೂರೈಕೆಯಾಗುವ ನಲ್ಲಿಯ ನೀರನ್ನು ಹಾಲಿಗೆ ಬೆರೆಸಿ ಮಗುವಿಗೆ ಕುಡಿಸಿದ್ದೆವು. ತಕ್ಷಣವೇ ಮಗುವಿಗೆ ವಾಂತಿ ಶುರುವಾಗಿ ತೀವ್ರ ಅಸ್ವಸ್ಥಗೊಂಡಿತು. ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಅಲೆದಾಡಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಗುವಿನ ತಾಯಿ ಕಣ್ಣೀರು ಹಾಕಿದ್ದಾರೆ. ಅದಲ್ಲದೆ, ಇವರ 10 ವರ್ಷದ ಪುತ್ರಿ ಕೂಡ ಈಗ ಹೊಟ್ಟೆನೋವಿನಿಂದ ಆಸ್ಪತ್ರೆ ಸೇರಿದ್ದಾಳೆ.
ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ?
ಇಂದೋರ್ನ ಭಾಗೀರಥಪುರ ಮತ್ತು ಮರಾಠಿ ಮೊಹಲ್ಲಾದಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಕಳೆದ ಆರು ತಿಂಗಳಿನಿಂದ ನಲ್ಲಿಯಲ್ಲಿ ವಾಸನೆ ಬರುವ ಕೊಳಕು ನೀರು ಬರುತ್ತಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡುತ್ತಲೇ ಬಂದಿದ್ದರು. ಆದರೆ, ಅಧಿಕಾರಿಗಳ ಉದಾಸೀನತೆ ಇಂದು 13 ಜನರ ಪ್ರಾಣ ಬಲಿ ಪಡೆದಿದೆ. ಸಾವಿರಕ್ಕೂ ಅಧಿಕ ಜನರು ಹೊಟ್ಟೆನೋವು, ವಾಂತಿ, ಬೇಧಿಯಿಂದ ಬಳಲುತ್ತಿದ್ದು, 200ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ದುರಂತಕ್ಕೆ ಅಸಲಿ ಕಾರಣವೇನು ?
ಪ್ರಾಥಮಿಕ ತನಿಖೆಯ ಪ್ರಕಾರ, ನರ್ಮದಾ ನದಿಯಿಂದ ನೀರು ಪೂರೈಸುವ ಮುಖ್ಯ ಪೈಪ್ಲೈನ್ ಒಂದು ಸಾರ್ವಜನಿಕ ಶೌಚಾಲಯದ ಅಡಿಯಿಂದ ಹಾದು ಹೋಗುತ್ತದೆ. ಈ ಪೈಪ್ಲೈನ್ ಸೋರಿಕೆಯಾಗುತ್ತಿರುವುದರಿಂದ ಶೌಚಾಲಯದ ಮಲಿನ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಮನೆಗಳಿಗೆ ಪೂರೈಕೆಯಾಗುತ್ತಿದೆ. ಹೊಸ ಪೈಪ್ಲೈನ್ ಅಳವಡಿಸಲು 2.5 ಕೋಟಿ ರೂ.ಗಳ ಟೆಂಡರ್ ನಾಲ್ಕು ತಿಂಗಳ ಹಿಂದೆಯೇ ಅನುಮೋದನೆಯಾಗಿದ್ದರೂ, ಕಾಮಗಾರಿ ಮಾತ್ರ ಶುರುವಾಗಿರಲಿಲ್ಲ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಮುನ್ಸಿಪಲ್ ಕಾರ್ಪೊರೇಷನ್ ವಲಯ ಅಧಿಕಾರಿ ಮತ್ತು ಸಹಾಯಕ ಎಂಜಿನಿಯರ್ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಲು ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.





