ರಾಹುಲ್ ಗಾಂಧಿ ಆಪ್ತೆ, ಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಿಮಾನಿ ಸಾವಿನ ಹಿಂದಿನ ಭಯಾನಕ ಸತ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ನೀನೆ ನನ್ನ ಪ್ರಾಣ ಅಂತ ಪ್ರೀತಿಸಿದ ಪ್ರಿಯಕರನೇ ಹಿಮಾನಿಯನ್ನು ಕೊಂದು ಸೂಟ್‌ಕೇಸ್ ತುಂಬಿದ್ದಾನೆ ಅನ್ನೋ ಸತ್ಯ ಪೊಲೀಸ್ ತನಿಖೆಯಿಂದ ಹೊರಬಂದಿದೆ. ಅಷ್ಟಕ್ಕೂ ಹಿಮಾನಿ ನಾರ್ಮಲ್ ಹಾಗೂ ಪ್ರೇಮಿಯ ನಡುವೆ ಅಂತದ್ದೇನಾಯ್ತು..? ಆ ಪಾಪಿ ಪ್ರಿಯಕರನಿಗೆ ಆಕೆಯನ್ನು ಕೊಲ್ಲುವಷ್ಟು ದ್ವೇಷ ಇತ್ತಾ..? ಅನ್ನೋದ್ರ ಡೀಟೆಲ್ಸ್ ಇಲ್ಲಿದೆ ನೋಡಿ.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ವೇಳೆ ರಾಹುಲ್‌ಗೆ ಆಪ್ತರಾಗಿ ಕಾಣಿಸಿಕೊಂಡು ದೇಶಾದ್ಯಂತ ಸುದ್ದಿಯಾಗಿದ್ದ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನಾರ್ವಲ್ ಬರ್ಬರವಾಗಿ ಕೊಲೆಯಾಗಿದ್ದಾಳೆ. ಹಿಮಾನಿ ಶವ ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಪತ್ತೆಯಾಗಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಹರಿಯಾಣದ ರೋಹ್ಟಕ್ ಜಿಲ್ಲೆಯ ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಇರುವುದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್‌ನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ್ದರು. ಶವವನ್ನು ಹೊರತೆಗೆದಾಗ ಕುತ್ತಿಗೆ ಭಾಗಕ್ಕೆ ದುಪ್ಪಟ್ಟಾದಿಂದ ಬಿಗಿಯಲಾಗಿತ್ತು. ಈ ಬಗ್ಗೆ ತನಿಖೆ ಶುರು ಮಾಡಿದ ಪೊಲೀಸರು ಎರಡೇ ದಿನದಲ್ಲಿ ಹಿಮಾನಿ ನಾರ್ವಲ್ ಸಾವಿನ ರಹಸ್ಯವನ್ನು ಭೇದಿಸಿದ್ದಾರೆ.
ಹತ್ಯೆ ನಡೆದ 2 ದಿನದಲ್ಲಿ ಸೂಟ್‌ಕೇಸ್ ಬೆನ್ನತ್ತಿದ ಪೊಲೀಸರು ದೆಹಲಿಯಲ್ಲಿ ಆರೋಪಿಯ ಸುಳಿವು ಪತ್ತೆ ಹಚ್ಚಿದ್ದರು. ಬಂಧಿಸಿದ ಬಳಿಕ ಆರೋಪಿ ಸಚಿನ್ ಪೊಲೀಸರ ವಿಚಾರಣೆಯ ವೇಳೆ ಹತ್ಯೆಯ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ನನ್ನ – ಹಿಮಾನಿ ನಡುವೆ ದೈಹಿಕ ಸಂಬಂಧ ಇತ್ತು. ಬಳಿಕ ಸಮಸ್ಯೆ ಉದ್ಭವಿಸಿದ್ದರಿಂದ ಹತ್ಯೆ ಮಾಡಿದ್ದಾಗಿ ಆರೋಪಿ ಸಚಿನ್ ಹೇಳಿಕೆ ನೀಡಿದ್ದಾನೆ.
ಹಣ ಕೇಳಿದ್ದಕ್ಕೆ ಪ್ರಾಣವನ್ನೇ ತೆಗೆದ ಪ್ರಿಯಕರ..!
ಹರಿಯಾಣದ ಬಹಾದ್ದೂರ್ ಘಡ ಜಿಲ್ಲೆಯ ಸಚಿನ್ ಹಾಗೂ ಹಿಮಾನಿ ನಾರ್ವಲ್ ಮಧ್ಯೆ ಸಂಬಂಧ ಇತ್ತು ಎನ್ನಲಾಗಿದೆ. ಹಿಮಾನಿ ನಾರ್ವಲ್ ಆರೋಪಿ ಸಚಿನ್‌ನಿಂದ ಹಣ ವಸೂಲಿ ಮಾಡಿದ್ದರಂತೆ. ಹಣಕ್ಕಾಗಿ ಮತ್ತೆ ಮತ್ತೆ ಸಚಿನ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ದೊಡ್ಡ ಮೊತ್ತ ಹಣಕ್ಕಾಗಿ ಸಚಿನ್ ಬಳಿ ಬೇಡಿಕೆ ಇಟ್ಟಿದ್ದಳಂತೆ. ಹಣದ ಸುಲಿಗೆಗೆ ಬೇಸತ್ತ ಸಚಿನ್, ರೋಹಟಕ್‌ನ ತನ್ನ ಮನೆಯಲ್ಲೇ ಹಿಮಾನಿ ನಾರ್ವಲ್ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು ಸೂಟ್ ಕೇಸ್‌ನಲ್ಲಿ ತುಂಬಿ ಬಸ್ ಸ್ಟಾಂಡ್ ಬಳಿ ಇಟ್ಟು ಹೋಗಿದ್ದಾನೆ.
ಲವ್ ಅಫೇರ್, ಹಣಕ್ಕಾಗಿ ನಡೆದ ಬ್ಲಾಕ್ ಮೇಲ್‌ನಿಂದ ಹಿಮಾನಿ ಹತ್ಯೆ ನಡೆದಿರುವುದು ಆರೋಪಿಯ ತಪ್ಪೊಪ್ಪಿಗೆಯಿಂದ ಬಯಲಾಗಿದೆ. ಹಿಮಾನಿಯ ಕುಟುಂಬಸ್ಥರು ಆಕೆಯ ಕೊಲೆಗಾರರನ್ನು ಬಂಧಿಸುವವರೆಗೆ ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದರು. ಈಗ ಆರೋಪಿ ಸಚಿನ್‌ಗೆ ಮರಣದಂಡನೆ ನೀಡಬೇಕೆಂದು ಹಿಮಾನಿ ನಾರ್ವಲ್ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.