ಭಾರತವು ಆರ್ಥಿಕವಾಗಿ ಬಲಿಷ್ಠವಾಗಿ ಹಾಗೂ ಸದೃಢವಾಗಿ ಮುಂದುವರೆಯುತ್ತಿರುವ ದೇಶ. ಈ ದೇಶಕ್ಕೆ ಮಿತ್ರರು ಎಷ್ಟಿದ್ದಾರೋ, ಶತ್ರುಗಳೂ ಅಷ್ಟೇ ಇದ್ದಾರೆ ಎಂದರೆ ತಪ್ಪಾಗಲಾರದು. ಅಂತಹ ದೇಶದಲ್ಲಿ ಇದೀಗ ಹೊಸ ವಿವಾದವೊಂದು ಎದ್ದಿದೆ. ‘ಎಥನಾಲ್ ಪೆಟ್ರೋಲ್ (E20) ವರ್ಸಸ್ ನಾರ್ಮಲ್ ಪೆಟ್ರೋಲ್ (E10)’ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಯಾವುದು ಬೆಸ್ಟ್ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಾರ್ಮಲ್ ಪೆಟ್ರೋಲ್ ಎಂದರೇನು? (E10)
ಈ ಪೆಟ್ರೋಲ್ ಉತ್ಪನ್ನಗಳನ್ನು ಭಾರತವು ರಷ್ಯಾ, ಇರಾನ್ ಸೇರಿದಂತೆ ಅನೇಕ ದೇಶಗಳಿಂದ ಕಚ್ಚಾ ತೈಲದ (ಕ್ರೂಡ್ ಆಯಿಲ್) ರೂಪದಲ್ಲಿ ಆಮದು ಮಾಡಿಕೊಳ್ಳುತ್ತದೆ. ಅಲ್ಲಿಂದ ಹಡಗಿನ ಮೂಲಕ ಬರುವ ಕಚ್ಚಾ ತೈಲವನ್ನು ಭಾರತಕ್ಕೆ ತಂದ ನಂತರ, ಇಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನಾಗಿ ಶುದ್ಧೀಕರಿಸಿ ಸಿದ್ಧಪಡಿಸಲಾಗುತ್ತದೆ.
ಈ ಹಿಂದೆ ಭಾರತದಲ್ಲಿ ಬಳಕೆಯಾಗುತ್ತಿದ್ದ ಸಾಮಾನ್ಯ ಪೆಟ್ರೋಲ್‌ನಲ್ಲಿ ಶೇಕಡಾ 10ರಷ್ಟು ಎಥನಾಲ್ ಅನ್ನು ಬೆರೆಸಲಾಗುತ್ತಿತ್ತು. ಇದನ್ನು ‘E10 ಪೆಟ್ರೋಲ್’ ಎಂದು ಕರೆಯಲಾಗುತ್ತದೆ. ಈ ಪೆಟ್ರೋಲ್ ಅನ್ನು ಎಲ್ಲಾ ರೀತಿಯ ವಾಹನಗಳಿಗೂ ಬಳಸಲಾಗುತ್ತಿದ್ದು, ಇದರಿಂದ ವಾಹನಗಳಿಗೆ ಯಾವುದೇ ಗಂಭೀರ ಸಮಸ್ಯೆಗಳು ಉಂಟಾಗಿರಲಿಲ್ಲ.
ಇ 20 (E20) ಪೆಟ್ರೋಲ್ ಎಂದರೇನು?
E20 ಪೆಟ್ರೋಲ್ ಎಂದರೆ ಶೇಕಡಾ 20ರಷ್ಟು ಎಥನಾಲ್ ಮತ್ತು ಶೇಕಡಾ 80ರಷ್ಟು ಪೆಟ್ರೋಲ್‌ನ ಮಿಶ್ರಣವಾಗಿದೆ. ಈ ಎಥನಾಲ್ ಅನ್ನು ಭಾರತದಲ್ಲೇ ಬೆಳೆಯಲಾಗುವ ಕಬ್ಬು, ಅಕ್ಕಿ ಮತ್ತು ಗೋಧಿ ಮುಂತಾದ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆಮದು ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಆದರೆ, ಇತ್ತೀಚೆಗೆ ಈ E20 ಪೆಟ್ರೋಲ್ ಬಳಕೆಯಿಂದ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ದ್ವಿಚಕ್ರ (2 Wheeler) ಹಾಗೂ ನಾಲ್ಕು ಚಕ್ರಗಳ (4 Wheeler) ವಾಹನಗಳ ಸವಾರರು ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗುತ್ತಿರುವುದರಿಂದ, ವಾಹನ ಸವಾರರು ತಮ್ಮ ಗಾಡಿಗಳಿಗೆ ಈ ತೈಲವನ್ನು ಹಾಕಿಸಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಗೆ ಪರಿಹಾರೋಪಾಯ ಒದಗಿಸಲು ಮುಂದಾಗಿರುವ ಸರ್ಕಾರ, E20 ಮತ್ತು E10 ಪೆಟ್ರೋಲ್‌ಗಳ ನಡುವಿನ ವ್ಯತ್ಯಾಸ ಹಾಗೂ ಇದರ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಎಥನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ಭರವಸೆಯನ್ನು ನೀಡಲು ಸರ್ಕಾರ ಹಾಗೂ ವಾಹನ ತಯಾರಕ ಕಂಪನಿಗಳು ಮುಂದಾಗಿವೆ ಎನ್ನಬಹುದು.





