ದಕ್ಷಿಣ ಭಾರತದ ರಾಜ್ಯಗಳಿಗೆ ಪದೇಪದೆ ಅನ್ಯಾಯ ಆಗ್ತಿದೆ ಎಂಬ ಕೂಗು ಇಂದು ನಿನ್ನೆಯದ್ದಲ್ಲ. 2020ರಲ್ಲಿ ಜಾರಿಗೆ ಬಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮತ್ತೆ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಕ್ಷೇತ್ರ ಮರುವಿಂಗಡಣೆ ಕುರಿತು ಚರ್ಚೆ ಆರಂಭವಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಫಿಕ್ಸ್ ಎಂಬ ಮಾತು ಕೇಳಿ ಬರುತ್ತಿದೆ. ಇಷ್ಟಕ್ಕೂ ಏನಿದು ಮರುವಿಂಗಡಣೆ..? ದಕ್ಷಿಣ ಭಾರತಕ್ಕೆ ಏನು ಎಫೆಕ್ಟ್ ಎಂದು ಇಲ್ಲಿ ವಿವರಿಸಲಾಗಿದೆ.
ಅನ್ಯಾಯ.. ಅನ್ಯಾಯ.. ದಕ್ಷಿಣ ಭಾರತಕ್ಕೆ ಅನ್ಯಾಯ. ತ್ರಿಭಾಷಾ ಸೂತ್ರ ಹೇರಿಕೆ ಮಾಡುವ ಮೂಲಕ ಅನ್ಯಾಯ.. ತೆರಿಗೆ ಹಂಚಿಕೆ ವಿಚಾರದಲ್ಲೂ ಅನ್ಯಾಯ.. ಅನುದಾನ ನೀಡಿಕೆಯಲ್ಲೂ ಅನ್ಯಾಯ.. ಹೀಗೆ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಮೇಲಿಂದ ಮೇಲೆ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಬೇಕು. ಇಲ್ಲದೇ ಹೋದರೆ ದಕ್ಷಿಣ ಭಾರತದ ರಾಜ್ಯಗಳಿಗೆ ನಿರಂತರ ಅನ್ಯಾಯ ಆಗಲಿದೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಕ್ಷೇತ್ರ ಮರುವಿಂಗಡಣೆ ವಿಚಾರ ಮುನ್ನೆಲೆಗೆ ಬಂದಿದ್ದು.. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮರುವಿಂಗಡಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಂ.ಕೆ.ಸ್ಟಾಲಿನ್‌ಗೆ ಬಿಆರ್‌ಎಸ್ ನಾಯಕ ಕೆ.ಟಿ.ರಾಮರಾವ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ.
ಸಿದ್ದರಾಮಯ್ಯ, ಎಂ.ಕೆ.ಸ್ಟಾಲಿನ್, ಕೆ.ಟಿ.ರಾಮರಾವ್ ಎತ್ತಿರುವ ಆಕ್ಷೇಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುವುದಿಲ್ಲ. ಕ್ಷೇತ್ರ ಮರುವಿಂಗಡಣೆ ಬಳಿಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರ ಕಡಿಮೆಯಾಗಲ್ಲ. ಈ ಕುರಿತು ಯಾವುದೇ ಭಯ ಬೇಡ ಎಂದು ಹೇಳಿದ್ದಾರೆ. ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. 2021ರಲ್ಲಿ ಭಾರತದಲ್ಲಿ ಜನಗಣತಿ ನಡೆದಿರಲಿಲ್ಲ. 2020ರಲ್ಲಿ ಕರೋನಾ ಸಾಂಕ್ರಾಮಿಕ ರೋಗ ತಾಂಡವ ಆಡುತ್ತಿತ್ತು. ಹೀಗಾಗಿ ಜನಗಣತಿಯನ್ನು ಮುಂದೂಡಲಾಗಿತ್ತು. ಸುಮಾರು 50 ವರ್ಷದ ಬಳಿಕ ಮರುವಿಂಗಡಣೆಗೆ ವಿಧಿಸಿದ್ದ ತಡೆ ಕೊನೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದೆ.
ಇದನ್ನೂ ಓದಿ: ನಿತೀಶ್ ಕುಮಾರ್ ಆಡಳಿತಕ್ಕೆ ಫುಲ್ ಸ್ಟಾಪ್..! ಸಮೀಕ್ಷೆ ಹೇಳಿದ್ದೇನು..?
ಭಾರತದಲ್ಲಿ ಇದುವರೆಗೆ ಸುಮಾರು ಮೂರು ಬಾರಿ ಲೋಕಸಭಾ ಕ್ಷೇತ್ರಗಳ ವಿಂಗಡಣೆ ಅಥವಾ ಮರುವಿಂಗಡಣೆಯಾಗಿದೆ. 1951ರಲ್ಲಿ ಕ್ಷೇತ್ರಗಳ ವಿಂಗಡಣೆಯಾಗಿತ್ತು. ಆಗ ಲೋಕಸಭೆಯಲ್ಲಿ 494 ಸದಸ್ಯರಿದ್ದರು. 1961ರಲ್ಲಿ ಮೊದಲ ಬಾರಿಗೆ ಕ್ಷೇತ್ರಗಳ ಮರುವಿಂಗಡಣೆ ಮಾಡಿದಾಗ ಲೋಕಸಭೆ ಸದಸ್ಯರ ಸಂಖ್ಯೆ, 522ಕ್ಕೆ ಏರಿಕೆಯಾಗಿತ್ತು. 1971ರಲ್ಲಿ ಎರಡನೇ ಮತ್ತು ಕೊನೆಯ ಬಾರಿಗೆ ಕ್ಷೇತ್ರಗಳ ಮರುವಿಂಗಡಣೆ ಮಾಡಿದಾಗ, ಲೋಕಸಭೆ ಸದಸ್ಯರ ಸಂಖ್ಯೆ ಪ್ರಸ್ತುತ ಇರೋ 543ಕ್ಕೆ ಹೆಚ್ಚಳವಾಗಿತ್ತು. 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಆಗ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಯೋಜನೆಯನ್ನ ಶುರು ಮಾಡಿದ್ದರು. ಹೀಗಾಗಿ ಸಂವಿಧಾನದ 42ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು, ಕುಟುಂಬ ಕಲ್ಯಾಣ ಯೋಜನೆ ಸಮರ್ಪಕವಾಗಿ ಜಾರಿಗೆ ಬರುವವರೆಗೆ ಕ್ಷೇತ್ರ ಮರುವಿಂಗಡಣೆಗೆ ತಡೆ ವಿಧಿಲಾಗಿತ್ತು.
2001ರಲ್ಲಿ ಕ್ಷೇತ್ರಗಳ ಮರುವಿಂಗಡಣೆಗೆ ವಿಧಿಸಲಾಗಿದ್ದ ತಡೆ ಅಂತ್ಯವಾಗಿತ್ತು. ಆಗ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ, ದೇಶದಲ್ಲಿ ಸಮಗ್ರವಾಗಿ ಕುಟುಂಬ ಕಲ್ಯಾಣ ಯೋಜನೆ ಜಾರಿಗೆ ಬಂದ ಬಳಿಕ ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಸಮ ಪ್ರಮಾಣದ ಜನಸಂಖ್ಯೆಯನ್ನು ಒಳಗೊಂಡಂತೆ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸುವುದು ಒಳ್ಳೆಯದು. ಈಗಲೇ ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ, ಅತ್ಯಂತ ಪರಿಣಾಮಕಾರಿಯಾಗಿ ಕುಟುಂಬ ಕಲ್ಯಾಣ ಯೋಜನೆಯನ್ನ ಅಳವಡಿಸಿಕೊಂಡು, ಜನಸಂಖ್ಯೆ ನಿಯಂತ್ರಣಕ್ಕೆ ತಂದಿರುವ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ 2026ರವರೆಗೆ ಕ್ಷೇತ್ರ ಮರುವಿಂಗಡಣೆಗೆ ವಿಧಿಸಿರುವ ತಡೆಯನ್ನು ಮುಂದುವರಿಸೋದು ಉತ್ತಮ ಎಂದು ತಿಳಿದು, ಸಂವಿಧಾನದ 84ನೇ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸರ್ವಾನುಮತದ ಒಪ್ಪಿಗೆ ಸೂಚಿಸಿದ್ದವು.
ಹೇಳಬೇಕು ಎಂದರೆ, 2026ರಲ್ಲಿ ಮರುವಿಂಗಡಣೆಗೆ ವಿಧಿಸಿದ್ದ ತಡೆ ತೆರವಾದ ಬಳಿಕ ನಡೆಯುವ ಜನಗಣತಿ ಆಧರಿಸಿ, ಮರುವಿಂಗಡಣೆ ಮಾಡಬೇಕು. ಅಂದರೆ, 2031ರ ಗಣತಿ ಬಳಿಕ ಮರುವಿಂಗಡಣೆ ಪ್ರಕ್ರಿಯೆ ಕೈಗೊಳ್ಳಬೇಕು. ಆದರೆ, 2021ರಲ್ಲಿ ಕರೋನಾ ಕಾರಣಕ್ಕೆ ಜನಗಣತಿ ಮಾಡಲಾಗಿಲ್ಲ. ಹೀಗಾಗಿ 2026ರಲ್ಲಿ ಜನಗಣತಿ ನಡೆಸಿ, ಅದರ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಜನಗಣತಿ ವಿಳಂಬವಾಗಿರುವುದು ಒಂದು ಕಾರಣವಾಗಿದ್ದರೆ, 2023ರಲ್ಲಿ ಜಾರಿಗೆ ಬಂದಿರುವ ಮಹಿಳಾ ಮೀಸಲು ಕಾಯ್ದೆ ಜಾರಿಗೆ ತರಲು ಮೋದಿ ಸರ್ಕಾರ ನಿರ್ಧರಿಸಿದೆ. ಮಹಿಳಾ ಮೀಸಲು ಕಾಯ್ದೆ ಜಾರಿಗೆ ತರಬೇಕಾದರೆ ಕ್ಷೇತ್ರ ಮರುವಿಂಗಡಣೆ ಆಗಬೇಕು. ಕೆಲವು ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಈಗಾಗಲೇ ಕ್ಷೇತ್ರ ಮರುವಿಂಗಡಣೆ ಕಾರ್ಯ ಆರಂಭಿಸಿದೆ ಎಂದು ಗೊತ್ತಾಗಿದೆ.
ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂಬ ಕಾರಣಕ್ಕೆ, ಕೇಂದ್ರ ಸರ್ಕಾರದ ಮರುವಿಂಗಡಣೆ ನಿರ್ಧಾರವನ್ನು ತಮಿಳುನಾಡು ಸಿಎಂ ಸ್ಟಾಲಿನ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕೆ.ಟಿ.ರಾಮರಾವ್ ವಿರೋಧಿಸುತ್ತಿದ್ದಾರೆ. ಇವರು ಹೇಳುತ್ತಿರುವುದರಲ್ಲಿ ನಿಜ ಇದೆಯಾದರೂ, ಅರ್ಧ ಸತ್ಯ ಹೇಳುತ್ತಿದ್ದಾರೆ. ಏಕೆಂದರೆ, ಸಿದ್ದರಾಮಯ್ಯರ ಕಾಂಗ್ರೆಸ್ ಪಕ್ಷವೇ ಲೋಕಸಭೆ ಚುನಾವಣೆ ವೇಳೆ ಕಿತನೇ ಆಬಾದಿ, ಉತ್ನೆ ಸೀಟೇ ಅಂದರೆ, ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ಆಗಬೇಕು ಎಂದು ಆಗ್ರಹಿಸಿತ್ತು. ಇದಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿ, ಇದರಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯವಾಗಲಿದೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಪ್ರಸ್ತುತ 1971ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆಯಾಗಿದೆ. 1971ರಲ್ಲಿ ಪ್ರತಿ ಕ್ಷೇತ್ರದಲ್ಲಿ ಸುಮಾರು 10 ಲಕ್ಷ ಜನಸಂಖ್ಯೆಯನ್ನು ಒಳಗೊಂಡಿರುವಂತೆ ಕ್ಷೇತ್ರ ಮರುವಿಂಗಡಣೆ ಮಾಡಲಾಗಿತ್ತು. 2001ರಲ್ಲಿ 1971ರ ಜನಗಣತಿ ಆಧರಿಸಿ, 2001ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿದ್ದ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸಲಾಗಿತ್ತು. ಒಂದು ವೇಳೆ 2026ರಲ್ಲಿ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆದರೆ, ಪ್ರಸ್ತುತ ಲೋಕಸಭೆಯಲ್ಲಿ 129 ಸದಸ್ಯರನ್ನು ಹೊಂದಿರುವ ದಕ್ಷಿಣ ಭಾರತದ ಸಂಸದರ ಸಂಖ್ಯೆ, 144ಕ್ಕೆ ಏರಿಕೆಯಾಗಲಿದೆ. ಇದಕ್ಕೆ ಹೋಲಿಸಿದರೆ, ಹಿಂದಿ ಭಾಷಿಕ ರಾಜ್ಯಗಳನ್ನು ಪ್ರತಿನಿಧಿಸುವ ಸದಸ್ಯರ ಗಣನೀಯವಾಗಿ ಏರಿಕೆಯಾಗಲಿದೆ. ಪ್ರಸ್ತುತ ಒಟ್ಟು ಲೋಕಸಭೆ ಸದಸ್ಯರ ಶೇಕಡವಾರು ಪ್ರಮಾಣದಲ್ಲಿ ದಕ್ಷಿಣ ಭಾರತದ ಸಂಸದರು ಶೇಕಡ 24ರಷ್ಟಿದ್ದಾರೆ. ಒಂದು ವೇಳೆ ಕ್ಷೇತ್ರ ಮರುವಿಂಗಡಣೆಯಾದರೆ, ದಕ್ಷಿಣ ಭಾರತದ ಸಂಸದರ ಪ್ರಮಾಣ ಶೇಕಡ 19ಕ್ಕೆ ಇಳಿಕೆಯಾಗಲಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ, ಹಿಂದಿ ಭಾಷಿಕ ರಾಜ್ಯಗಳ ಸದಸ್ಯರ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.
ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂಬುದು ಅಮಿತ್ ಶಾ ಸೇರಿ ಬಿಜೆಪಿ ನಾಯಕರ ವಾದವಾಗಿದೆ. ಆದರೆ, ಶೇಕಡವಾರು ಸಂಖ್ಯೆಯಲ್ಲಿ ಇಳಿಕೆಯಾಗಲಿದೆ ಎಂಬುದು ವಿಪಕ್ಷಗಳ ವಾದವಾಗಿದೆ. ಒಟ್ಟಾರೆಯಾಗಿ ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವಿಚಾರವನ್ನ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೂ ಅಪಾಯಕಾರಿ ವಿಚಾರ ಎಂದರೆ, ಸ್ಟಾಲಿನ್, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಜನರ ದಿಕ್ಕು ತಪ್ಪಿಸುವ ಭರದಲ್ಲಿ ಅರ್ಧ ಸತ್ಯ ಹೇಳುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಅತ್ಯುತ್ತಮ ಉದಾಹರಣೆಯಾಗಿದೆ. ಎಕ್ಸ್ ಖಾತೆಯ ಬ್ಯಾನರ್‌ನಲ್ಲಿ ಸತ್ಯ ಮೇವ ಜಯತೇ ಎಂಬ ಫೋಟೋ ಹಾಕಿಕೊಂಡಿರುವ ಸಿದ್ದರಾಮಯ್ಯ, ಅರ್ಧ ಸತ್ಯ ಹೇಳುವ ಮೂಲಕ ನಗೆಪಾಟಲಿಗೆ ಒಳಗಾಗಿದ್ದಾರೆ. ಸುಳ್ಳಿಗಿಂತಲೂ ಅರ್ಧ ಸತ್ಯ ಡೇಂಜರ್ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಾಗುತ್ತಿಲ್ಲವೇ ಎಂದು ಜನ ಪ್ರಶ್ನಿಸಲು ಶುರು ಮಾಡಿದ್ದಾರೆ.