ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಮುಂದುವರಿದಿರುವ ನಡುವೆ, ಕೇಂದ್ರ ಸರ್ಕಾರ ಮತ್ತು ಕಾಕ್ರೋಚ್ ಜನತಾ ಪಕ್ಷ (CJP) ನಡುವಿನ ಮೂರನೇ ಸುತ್ತಿನ ಮಹತ್ವದ ಸಭೆಗೆ ಮುನ್ನ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದೆ. ಸಭೆಗೆ ಮುನ್ನ ಸಿಜೆಪಿಯ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. “ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ನಾವು ಇನ್ನಷ್ಟು ಕಠಿಣ ಹೋರಾಟದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಕೇವಲ ಸಭೆಗಳನ್ನು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮಸ್ಯೆಗೆ ಸ್ಪಷ್ಟ ಪರಿಹಾರ ಮತ್ತು ಹೊಣೆಗಾರಿಕೆ ನಿಗದಿಯಾಗಬೇಕು,” ಎಂದು ಅವರು ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿರುವ ಸಿಜೆಪಿ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಈ ಹೋರಾಟದಲ್ಲಿ ಭಾಗವಹಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಒದಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದ್ದು, ಸಿಜೆಪಿ ಪ್ರತಿನಿಧಿಗಳೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಆ ಸಭೆಗಳಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರನೇ ಸುತ್ತಿನ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದ್ದು, ದೇಶದಾದ್ಯಂತ ಇದರತ್ತ ಗಮನ ಹರಿದಿದೆ.
ಸಿಜೆಪಿ ನೀಡಿದ್ದ ಗಡುವು ಇಂದಿಗೆ ಅಂತ್ಯಗೊಳ್ಳಲಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಸರ್ಕಾರ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲ ಮೂಡಿಸಿದೆ. ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಹೋರಾಟವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಪಕ್ಷದ ನಾಯಕರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇದರ ನಡುವೆ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜಂತರ್ ಮಂತರ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲವು ಮೆಟ್ರೋ ನಿಲ್ದಾಣಗಳ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ವಾರಾಂತ್ಯದಲ್ಲಿ ರಾತ್ರಿ 8 ಗಂಟೆಯ ನಂತರ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಇದೀಗ ಕೇಂದ್ರ ಸರ್ಕಾರ ಮತ್ತು ಸಿಜೆಪಿ ನಡುವಿನ ಮೂರನೇ ಸುತ್ತಿನ ಮಾತುಕತೆಯ ಫಲಿತಾಂಶ ಏನಾಗಲಿದೆ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ವಿದ್ಯಾರ್ಥಿಗಳು, ಪೋಷಕರು ಹಾಗೂ ದೇಶದ ಜನರ ಗಮನ ನೆಟ್ಟಿದೆ.





