ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಘಟನೆ ಬಳಿಕ ಕಟ್ಟಡದ ಮಾಲೀಕ ಹರಿರಾಮ್ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ದೆಹಲಿ ಪೊಲೀಸರು ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಿದ್ದಾರೆ. ಮಾಲೀಕನನ್ನು ಬಂಧಿಸಲು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ನೈಋತ್ಯ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದುಬಿದ್ದಿತ್ತು. ಕಟ್ಟಡದಲ್ಲಿ ಪಿಜಿ ನಡೆಸಲಾಗುತ್ತಿದ್ದು, ಘಟನೆಯ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಒಳಗಿದ್ದರು ಎನ್ನಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಭಾನುವಾರ ಮಧ್ಯಾಹ್ನದಿಂದಲೇ ಆರಂಭಗೊಂಡಿದ್ದು, ಎನ್‌ಡಿಆರ್‌ಎಫ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ಸಂಬಂಧ ದೆಹಲಿ ಪೊಲೀಸರು ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಟ್ಟಡ ಕುಸಿಯುವ ಮುನ್ನ ಅದರ ಸ್ಥಿತಿ ಹೇಗಿತ್ತು? ಕಟ್ಟಡದಲ್ಲಿ ದುರಸ್ತಿ ಕಾಮಗಾರಿ ನಡೆಸಲಾಗಿತ್ತೇ? ಕಾಮಗಾರಿ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ? ಎಂಬ ಹಲವು ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರಿಂದ ಹಾಗೂ ಘಟನೆಯನ್ನು ಕಣ್ಣಾರೆ ಕಂಡವರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಆರ್.ಕೆ. ಪುರಂ ಶಾಸಕ ಅನಿಲ್ ಶರ್ಮಾ, ಕಟ್ಟಡ ಕುಸಿದ ಸಂದರ್ಭದಲ್ಲಿ ಪಿಜಿಯೊಳಗೆ ನಿಖರವಾಗಿ ಎಷ್ಟು ಮಂದಿ ಇದ್ದರು ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 13 ಮಕ್ಕಳು ಹಾಗೂ 3ರಿಂದ 4 ಮಂದಿ ಕಾರ್ಮಿಕರು ಸೇರಿದಂತೆ ಒಟ್ಟು 16ರಿಂದ 17 ಮಂದಿ ಕಟ್ಟಡದಲ್ಲಿದ್ದರು ಎನ್ನಲಾಗಿದೆ. ಇವರಲ್ಲಿ 12 ಮಂದಿಯನ್ನು ರಕ್ಷಿಸಲಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 40 ವರ್ಷ ಹಳೆಯದಾದ ಈ ಕಟ್ಟಡದ ನೆಲಮಹಡಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಕಟ್ಟಡದ ಭಾರವನ್ನು ಹೊತ್ತಿದ್ದ ಕೆಲವು ಗೋಡೆಗಳಲ್ಲಿ ಕಾಮಗಾರಿ ನಡೆಸಲಾಗಿದ್ದೇ ಕಟ್ಟಡ ಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೋಡೆಗಳ ರಚನೆಯಲ್ಲಿ ಬದಲಾವಣೆ ಮಾಡಿರುವುದು ದುರಂತಕ್ಕೆ ಕಾರಣವಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬಿಲ್ಡರ್ ಅಥವಾ ಆಸ್ತಿ ಮಾಲೀಕರ ನಿರ್ಲಕ್ಷ್ಯದಿಂದಲೇ ಇಂತಹ ದೊಡ್ಡ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಶಾಸಕ ಅನಿಲ್ ಶರ್ಮಾ ಹೇಳಿದ್ದಾರೆ. ಕಟ್ಟಡದಲ್ಲಿ ದುರಸ್ತಿ ಅಥವಾ ರಚನಾತ್ಮಕ ಬದಲಾವಣೆಗಳನ್ನು ಮಾಡುವ ಮುನ್ನ ತಜ್ಞ ಎಂಜಿನಿಯರ್‌ಗಳ ಸಲಹೆ ಪಡೆಯಬೇಕಿತ್ತು. ಆದರೆ ಅಗತ್ಯ ಮುನ್ನೆಚ್ಚರಿಕೆ ವಹಿಸದಿರುವುದು ಅಪಾಯಕ್ಕೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸೂಚನೆಯಂತೆ ಕಟ್ಟಡದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಸತ್ಯ ನಿಕೇತನ ಕಟ್ಟಡ ಕುಸಿತದ ಬೆನ್ನಲ್ಲೇ ದೆಹಲಿ ಸರ್ಕಾರ ಕಟ್ಟಡಗಳ ಸುರಕ್ಷತೆ ಕುರಿತು ಮಹತ್ವದ ಕ್ರಮಕ್ಕೆ ಮುಂದಾಗಿದೆ. ನಗರದಾದ್ಯಂತ ಇರುವ ಅನಧಿಕೃತ ಕಟ್ಟಡಗಳನ್ನು ತಕ್ಷಣವೇ ಗುರುತಿಸಿ ಸೀಲ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟಡಗಳ ಸುರಕ್ಷತೆ ಹಾಗೂ ನಿಯಮಾನುಸರಣೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸೋಮವಾರ ಬೆಳಗ್ಗೆ ಸತ್ಯ ನಿಕೇತನಕ್ಕೆ ಮತ್ತೊಮ್ಮೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ಚಿಕಿತ್ಸೆ ಹಾಗೂ ಕೈಗೊಳ್ಳಲಾಗುತ್ತಿರುವ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸದ್ಯ ಅವಶೇಷಗಳ ತೆರವು ಹಾಗೂ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕಟ್ಟಡ ಕುಸಿತಕ್ಕೆ ನಿಖರ ಕಾರಣ ಏನು ಎಂಬುದು ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ. ಕಟ್ಟಡದ ಮಾಲೀಕ ಹರಿರಾಮ್ ಪತ್ತೆಯಾದ ಬಳಿಕ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆಯಿದೆ.





