ನವದೆಹಲಿ, ಜು. 7: ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಎಕ್ಸ್ ಖಾತೆಯ ಮೇಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ವಾದ-ಪ್ರತಿವಾದಗಳನ್ನು ಪರಿಗಣಿಸಿ, ಸಿಜೆಪಿಯ ಎಕ್ಸ್ ಖಾತೆಯನ್ನು ಮರುಸ್ಥಾಪಿಸುವಂತೆ ನಿರ್ದೇಶನ ನೀಡಿದರು. ಖಾತೆ ನಿರ್ಬಂಧಿಸಲು ಕಾರಣವಾಗಿದ್ದ ಪ್ರಮುಖ ಆತಂಕ ಈಗ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಈ ಮೂಲಕ ಪಾರ್ಟಿಗೆ ಮಹತ್ವದ ಜಯ ಸಿಕ್ಕಂತಾಗಿದೆ.
ಏನಿತ್ತು ವಿವಾದ
ಕಾಕ್ರೋಚ್ ಜನತಾ ಪಾರ್ಟಿಯನ್ನು ವಿಡಂಬನಾತ್ಮಕ ಸಂಘಟನೆಯಾಗಿ ಪ್ರಾರಂಭಿಸಲಾಯಿತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಈ ವರ್ಷ ಮೊದಲ ಬಾರಿ ನಡೆದಿದ್ದ ನೀಟ್ ಪರೀಕ್ಷೆ ರದ್ದಾದ ನಂತರ ಯುವ ಜನತೆಯ ಗಮನ ಸೆಳೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಸಿಜೆಪಿಗೆ ಭಾರಿ ಜನಬೆಂಬಲ ದೊರೆಯಲು ಆರಂಭವಾದ ಬೆನ್ನಲ್ಲೇ, ಮೇ ತಿಂಗಳಲ್ಲಿ ಭಾರತದಲ್ಲಿ ಅದರ ಎಕ್ಸ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಕೋರ್ಟ್ ನಲ್ಲಿ ವಾದ-ಪ್ರತಿವಾದ
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನೀಟ್ ಮರು ಪರೀಕ್ಷೆಯ ಹಿನ್ನೆಲೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಬಹುದು ಎನ್ನುವ ಕಾರಣಕ್ಕೆ ಖಾತೆಗೆ ನಿರ್ಬಂಧ ಹೇರಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪರೀಕ್ಷೆ ಈಗ ಮುಗಿದಿರುವುದರಿಂದ, ಇನ್ನು ಮುಂದೆ ಯಾವುದೇ ಆತಂಕಗಳಿಲ್ಲ ಎಂದು ಅವರು ತಿಳಿಸಿದರು.
ನ್ಯಾಯಾಲಯದ ಆದೇಶ
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ, “ನೀಟ್ ಪರೀಕ್ಷೆ ಈಗಾಗಲೇ ಮುಗಿದಿರುವುದರಿಂದ, ಖಾತೆ ನಿರ್ಬಂಧಕ್ಕೆ ಕಾರಣವಾಗಿದ್ದ ಪ್ರಮುಖ ಆತಂಕಕ್ಕೆ ಈಗ ಯಾವುದೇ ಪ್ರಸ್ತುತತೆ ಉಳಿದಿಲ್ಲ. ಹೀಗಾಗಿ ನಿರ್ಬಂಧ ಆದೇಶವನ್ನು ಹಿಂಪಡೆಯಲಾಗುತ್ತದೆ. ಅರ್ಜಿಯನ್ನು ಅನುಮೋದಿಸಲಾಗಿದೆ” ಎಂದು ತಿಳಿಸಿದರು. ಸಿಜೆಪಿಯ ಎಕ್ಸ್ ಖಾತೆಯನ್ನು ಮರುಸ್ಥಾಪಿಸುವಂತೆ ಸೂಚಿಸಿದರು.
ಏಕೆ ನಿರ್ಬಂಧಿಸಲಾಯಿತು?
ಎಕ್ಸ್ ಮೂಲಗಳ ಪ್ರಕಾರ, ಅಧಿಕಾರ ಹೊಂದಿರುವ ಸಂಸ್ಥೆಯಿಂದ ಸಮರ್ಪಕ ಮತ್ತು ಸೂಕ್ತ ಮನವಿ ಬಂದಾಗ ಅಥವಾ ನಿರ್ದಿಷ್ಟ ದೇಶದಲ್ಲಿ ಕೆಲವು ವಿಷಯಗಳಿಗೆ ಪ್ರವೇಶವನ್ನು ತಡೆಹಿಡಿಯುವುದು ಅಗತ್ಯವಾಗಬಹುದು ಎಂದು ಹೇಳಿದಾಗ ಅಂತಹ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೀಟ್ ವಿವಾದದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಜೆಪಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಸಿಜೆಪಿ ಪ್ರತಿಭಟನೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಡೆಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 10ನೇ ದಿನಕ್ಕೆ ಕಾಲಿಟ್ಟಿದೆ. ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ಸಿಜೆಪಿ ಹೋರಾಟ ಮುಂದುವರಿಸಿದೆ.
ಕಾಕ್ರೋಚ್ ಜನತಾ ಪಾರ್ಟಿಯ ಅಭಿಮಾನಿಗಳು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಜೆಪಿ ಖಾತೆ ಮತ್ತೆ ಸಕ್ರಿಯಗೊಳ್ಳಲಿ ಎಂದು ಆಶಿಸಿದ್ದಾರೆ. ಸಿಜೆಪಿ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವುದು ಮುಂದುವರಿಯಲಿದೆ ಎಂದು ಪಾರ್ಟಿ ವಕ್ತಾರರು ತಿಳಿಸಿದ್ದಾರೆ.





