ಮಹಾಕುಂಭ ಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ ಬ್ಯಾಕ್ಟೀರಿಯಾ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಇದೆಯೆಂಬ ವರದಿಯ ಮೂಲಕ ಮಹಾಕುಂಭವನ್ನು ಅಪಖ್ಯಾತಿಗೊಳಿಸಲಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿನ ನೀರು ಪೌರಾಣಿಕ ಸರಸ್ವತಿಯೊಂದಿಗೆ ಗಂಗಾ ಹಾಗೂ ಯಮುನಾ ನದಿ ಸೇರುವ ಸ್ಥಳ. ಇದು “ಕುಡಿಯಲು ಕೂಡ ಯೋಗ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಯಾಗರಾಜ್ನಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಮಹಾಕುಂಭ ಮೇಳದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಮಟ್ಟದ ಮಲದ ಬ್ಯಾಕ್ಟೀರಿಯಾ ಮತ್ತು ಒಟ್ಟು ಕೋಲಿಫಾರ್ಮ್ ಕಂಡುಬಂದಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೋಮವಾರ ಹೇಳಿತ್ತು. ಇದಕ್ಕೆ ಉತ್ತರ ಪ್ರದೇಶದ ವಿಧಾನಸಭೆಯಲ್ಲೇ ಉತ್ತರ ನೀಡಿರುವ ಯೋಗಿ ಆದಿತ್ಯನಾಥ್ “ಸನಾತನ ಧರ್ಮ, ಗಂಗಾ ಮಾತೆ ಮತ್ತು ಭಾರತ”ದ ವಿರುದ್ಧ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.
56 ಕೋಟಿ ಭಕ್ತರ ನಂಬಿಕೆಯೊಂದಿಗೆ ಚೆಲ್ಲಾಟ ಬೇಡ. ನಾವು ಇಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಿರುವ 56.25 ಕೋಟಿಗೂ ಹೆಚ್ಚು ಭಕ್ತರು ಈಗಾಗಲೇ ಪ್ರಯಾಗ್ರಾಜ್ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಂತಹ ನಕಲಿ ವಿಡಿಯೋ ನಂಬಿ ಮೋಸ ಹೋಗಬೇಡಿ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್ ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಹೇಳಿಕೆಗಳನ್ನು ಖಂಡಿಸಿದ ಯೋಗಿ, ಮಹಾಕುಂಭವು ಉತ್ತರ ಪ್ರದೇಶ ಸರ್ಕಾರದ ಸಂಘಟನೆಯಲ್ಲ, ಸಮಾಜದಿಂದ ಆಯೋಜಿಸಲ್ಪಟ್ಟಿದೆ ಮತ್ತು ಅವರ ಹೇಳಿಕೆಗಳು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಹೇಳಿದ್ದಾರೆ.
ತ್ರಿವೇಣಿ ಸಂಗಮ BOD (ಬಯೋಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ಮಟ್ಟ ಶೇ.3ಕ್ಕಿಂತ ಕಡಿಮೆ ಇದೆ. ನೀರಿನಲ್ಲಿರುವ ಆಮ್ಲಜನಕದ ಗುಣಮಟ್ಟ 8-9 ಇದೆ. ಇದು ಕೇವಲ ಸ್ನಾನಕ್ಕಷ್ಟೇ ಅಲ್ಲ, ಆಚಮನ ಅಂದ್ರೆ ಕುಡಿಯುವುದಕ್ಕೂ ಯೋಗ್ಯವಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅಸ್ತಮಾ, ಅಲರ್ಜಿ, ಚರ್ಮರೋಗ ಬರುತ್ತವೆ ಎಂದು ಕೆಲವು ತಜ್ಞರು ಹೇಳಿದ್ದ ವರದಿಗಳನ್ನು ನಿರಾಕರಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ಅಥವಾ ಕುಡಿಯುವುದರಿಂದ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕುಂಭಮೇಳದ ನೀರಿನ ಕುರಿತಂತೆ ಎದ್ದಿರುವ ವದಂತಿಗಳೆಲ್ಲ ಸುಳ್ಳು, ಕಪೋಲಕಲ್ಪಿತ ಎಂದು ಹೇಳಿದ್ದಾರೆ.