ಪಟ್ನಾ (ಜು.27): ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು AK-47 ರೈಫಲ್ ನಿಂದ ಗುಂಡು ಹಾರಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಂಡೇಟು ತಿಂದ ಮೂವರು ಪ್ರತಿಭಟನಾಕಾರರಿಗೆ ತೀವ್ರ ಗಾಯವಾಗಿದ್ದು, ಈ ದೃಶ್ಯ ಬೆಳಕಿಗೆ ಬಂದ ಬೆನ್ನಲ್ಲೇ ಸಂಬಂಧಿಸಿದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 25ರಂದು ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ‘ಬಿಹಾರ ಬಂದ್’ ವೇಳೆ ಸಿವಾನ್ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವಕರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಸಂದರ್ಭದಲ್ಲಿ ಒಬ್ಬ ಕಾನ್ಸ್‌ಟೇಬಲ್ AK-47 ರೈಫಲ್ ಹಿಡಿದು ಗುಂಡು ಹಾರಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಈ ವಿಡಿಯೋ ವೈರಲ್ ಆದ ಬಳಿಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ಮೂವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಕಾರ, ಮೂವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ.
ಗಾಯಾಳುಗಳಲ್ಲಿ 15 ವರ್ಷದ ಎಂಡಿ ಆರಿಫ್ ಎಂಬ ಬಾಲಕನೂ ಸೇರಿದ್ದಾನೆ. ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರಿಫ್, ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ರಾಜಕೀಯವಾಗಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕಾನ್ಸ್‌ಟೇಬಲ್ ಗುಂಡು ಹಾರಿಸುತ್ತಿರುವ ವಿಡಿಯೋ ಹಂಚಿಕೊಂಡು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ವಿಚಾರವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೂ ಪ್ರಸ್ತಾಪಿಸಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅತಿಯಾದ ಬಲಪ್ರಯೋಗ ನಡೆಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವಂತೆ ಅವರು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಪ್ರತಿಭಟನೆಯ ವೇಳೆ ಕೆಲವು ಪೊಲೀಸರು ರಿವಾಲ್ವರ್ ಹಿಡಿದು ಸಂಚರಿಸುತ್ತಿರುವ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸರು ಅನುಸರಿಸಿದ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ವೈರಲ್ ವಿಡಿಯೋ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಬಿಹಾರ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಿದೆ. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಇಲಾಖಾ ಮಟ್ಟದ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





