ಪಟ್ನಾ, ನವೆಂಬರ್ 17: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋಮವಾರ ಮಧ್ಯಾಹ್ನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಎನ್‌ಡಿಎ ಒಟ್ಟು 243 ಸ್ಥಾನಗಳಲ್ಲಿ 208ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಸಾಧಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಏಕಾಂಗಿಯಾಗಿ 89 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) 85 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಆದರೆ ಗೆಲುವಿನ ಉತ್ಸಾಹದಲ್ಲೂ ನಿತೀಶ್ ಕುಮಾರ್ ರಾಜೀನಾಮೆ ನೀಡಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೊಸ ವಿಧಾನಸಭೆ ರಚನೆಯಾದ ನಂತರ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಮತ್ತು ಸರ್ಕಾರ ರಚಿಸಲು ಈ ರಾಜೀನಾಮೆ ಅನಿವಾರ್ಯವಾಗಿತ್ತು. ಈಗಾಗಲೇ ರಾಜ್ಯಪಾಲರು ಚುನಾಯಿತ ಸದಸ್ಯರ ಪಟ್ಟಿಯನ್ನು ಸ್ವೀಕರಿಸಿದ್ದು, ಆಹ್ವಾನ ನೀಡಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ.
ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ “ಅಗತ್ಯ ಕ್ರಮ” ತೆಗೆದುಕೊಳ್ಳಲು ನಿತೀಶ್ ಕುಮಾರ್ ಅವರಿಗೆ ಸಂಪುಟ ಅಧಿಕಾರ ನೀಡಿತ್ತು. ಅದರೆ ಒಂದೇ ದಿನದಲ್ಲಿ ರಾಜೀನಾಮೆ ಸಲ್ಲಿಕೆ ನಡೆದಿದೆ. ಎನ್‌ಡಿಎ ಒಳಗೆ ಈಗ ಮುಖ್ಯ ಪ್ರಶ್ನೆ ಎಂದರೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದಾಗಿದೆ.
ಬಿಜೆಪಿ ಈ ಬಾರಿ ಜೆಡಿಯುಗಿಂತ ಹೆಚ್ಚು ಸ್ಥಾನ ಗಳಿಸಿರುವುದರಿಂದ ಸಿಎಂ ಸ್ಥಾನಕ್ಕೆ ತನ್ನ ಹಕ್ಕು ಚಲಾಯಿಸಬಹುದು ಎಂಬ ಚರ್ಚೆ ಜೋರಾಗಿದೆ. ಆದರೆ ನಿತೀಶ್ ಕುಮಾರ್ ಅವರೇ ಮತ್ತೆ ಸಿಎಂ ಆಗುವ ಸಾಧ್ಯತೆಯೇ ಹೆಚ್ಚು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ನಿತೀಶ್ ಕುಮಾರ್ ಈಗಾಗಲೇ ಚುನಾವಣೆಗೂ ಮುನ್ನ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.





