ಶ್ರೀನಗರ, ಜೂನ್ 17: ಹಿಮಾಲಯದ ಬೆಟ್ಟಗುಡ್ಡಗಳ ನಡುವೆ ನೈಸರ್ಗಿಕವಾಗಿ ಮೂಡಿಬರುವ ಅಮರನಾಥನ (Amarnath yatra) ಪವಿತ್ರ ಶಿವಲಿಂಗದ ದರ್ಶನಕ್ಕಾಗಿ ದೇಶಾದ್ಯಂತ ಲಕ್ಷಾಂತರ ಭಕ್ತರು (Devotees) ಕಾತರದಿಂದ ಕಾಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪವಿತ್ರ ಪರ್ವತ ಶ್ರೇಣಿಯಲ್ಲಿ ನಡೆಯುವ 2026ರ ಸಾಲಿನ ಅಮರನಾಥ ಯಾತ್ರೆಗೆ (Amarnath Yatra 2026) ಶ್ರೀ ಅಮರನಾಥಜಿ ಪ್ರೈನ್ ಬೋರ್ಡ್ (SASB) ಅಧಿಕೃತ ದಿನಾಂಕಗಳನ್ನು ಪ್ರಕಟಿಸಿದೆ.
ಯಾತ್ರೆಯ ಪ್ರಮುಖ ದಿನಾಂಕಗಳು
ಈ ವರ್ಷ ಜುಲೈ 3 ರಿಂದ ಆರಂಭವಾಗಲಿರುವ ಪವಿತ್ರ ಯಾತ್ರೆಯು ಆಗಸ್ಟ್ 28ರ ರಕ್ಷಾಬಂಧನದವರೆಗೆ (ಒಟ್ಟು 57 ದಿನಗಳು) ನಡೆಯಲಿದೆ. ದಕ್ಷಿಣ ಭಾರತದ ಭಕ್ತರು ಸೇರಿದಂತೆ ದೇಶದ ಎಲ್ಲಾ ಕಡೆಯಿಂದ ಭಕ್ತರು ಈ ಪವಿತ್ರ ಪ್ರಯಾಣಕ್ಕೆ ಆಗಮಿಸಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ನೋಂದಣಿ ಪ್ರಕ್ರಿಯೆ ಮತ್ತು ಕಡ್ಡಾಯ ನಿಯಮಗಳ ಸಂಪೂರ್ಣ ವಿವರವನ್ನು SASB ಪ್ರಕಟಿಸಿದೆ.
ಅಮರನಾಥ ಗುಹೆಗೆ ಎರಡು ಪ್ರಮುಖ ಮಾರ್ಗಗಳು
ಅಮರನಾಥ ಗುಹೆಯನ್ನು ತಲುಪಲು ಭಕ್ತರಿಗೆ ಎರಡು ದಾರಿಗಳಿವೆ. ನಿಮ್ಮ ಆರೋಗ್ಯ, ಸಮಯ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಸೂಕ್ತ ಮಾರ್ಗವನ್ನು ಆರಿಸಿಕೊಳ್ಳಬಹುದು.
-
ಬಾಲ್ತಾಲ್ ಮಾರ್ಗ (Baltal Route): ಇದು ಕೇವಲ 14 ಕಿಲೋಮೀಟರ್ ಉದ್ದದ ಅತ್ಯಂತ ಕಿರಿದಾದ ಮತ್ತು ಕಡಿದಾದ ಹಾದಿಯಾಗಿದೆ. ದೈಹಿಕವಾಗಿ ಸದೃಢರಾಗಿರುವವರು ಕೇವಲ ಒಂದೇ ದಿನದಲ್ಲಿ ಈ ಮಾರ್ಗದ ಮೂಲಕ ಟ್ರೆಕ್ಕಿಂಗ್ ಮುಗಿಸಿ ದರ್ಶನ ಪಡೆದು ಮರಳಬಹುದು. ಆದರೆ, ಈ ಮಾರ್ಗದಲ್ಲಿ ವಯಸ್ಸಾದವರು ಮತ್ತು ಮೊದಲ ಬಾರಿಗೆ ಯಾತ್ರೆ ಕೈಗೊಳ್ಳುವವರು ಇದನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು.
-
ಪಹಲ್ಲಾಮ್ ಮಾರ್ಗ (Pahalgam Route): ಇದು ಸಾಂಪ್ರದಾಯಿಕ ಹಾಗೂ ಅತ್ಯಂತ ಸುಂದರವಾದ ಮಾರ್ಗವಾಗಿದ್ದು, ಸುಮಾರು 46 ಕಿಲೋಮೀಟರ್ ಉದ್ದವಿದೆ. ಈ ಹಾದಿಯಲ್ಲಿ ಸಾಗಲು ಸಾಮಾನ್ಯವಾಗಿ 3 ರಿಂದ 5 ದಿನಗಳು ಬೇಕಾಗುತ್ತವೆ. ವಯಸ್ಸಾದವರಿಗೆ, ಮೊದಲ ಬಾರಿ ಹೋಗುವವರಿಗೆ ಮತ್ತು ಯಾತ್ರೆಯ ಆಧ್ಯಾತ್ಮಿಕ ಅನುಭವವನ್ನು ಸಂಪೂರ್ಣವಾಗಿ ಸವಿಯಲು ಇಚ್ಛಿಸುವವರಿಗೆ ಈ ಮಾರ್ಗ ಸೂಕ್ತವಾಗಿದೆ.
ನೋಂದಣಿ ಪ್ರಕ್ರಿಯೆ ಹೇಗೆ?
ಯಾತ್ರೆಗೆ ತೆರಳುವ ಮುನ್ನ ಪ್ರತಿಯೊಬ್ಬ ಭಕ್ತರೂ ಮುಂಗಡ ಪರವಾನಗಿ (Yatra Permit) ಪಡೆಯುವುದು ಕಡ್ಡಾಯವಾಗಿದೆ. ಅಧಿಕೃತ ವೆಬ್ಸೈಟ್ (jksasb.nic.in) ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಲು ಈ ಹಂತಗಳನ್ನು ಪಾಲಿಸಿ.
-
ಹಂತ 1: SASB ನ ಅಧಿಕೃತ ವೆಬ್ಸೈಟ್ ಭೇಟಿ ನೀಡಿ “Yatra Permit Registration” ಲಿಂಕ್ ಕ್ಲಿಕ್ ಮಾಡಿ.
-
ಹಂತ 2: ನಿಮ್ಮ ವೈಯಕ್ತಿಕ ವಿವರಗಳು, ಹೋಗಲು ಬಯಸುವ ದಿನಾಂಕ ಮತ್ತು ಮಾರ್ಗವನ್ನು ಆಯ್ಕೆ ಮಾಡಿ ಫಾರ್ಮ್ ಭರ್ತಿ ಮಾಡಿ.
-
ಹಂತ 3: ನಿಗದಿಪಡಿಸಿದ ಸರ್ಕಾರಿ ವೈದ್ಯರಿಂದ ಪಡೆದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಮತ್ತು ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಅಪ್ಲೋಡ್ ಮಾಡಿ.
-
ಹಂತ 4: ನಿಮ್ಮ ಮೊಬೈಲ್ಗೆ ಬರುವ OTP ವೆರಿಫೈ ಮಾಡಿ, ಆನ್ಲೈನ್ ಬ್ಯಾಂಕಿಂಗ್ ಮೂಲಕ ನಿಗದಿತ ಶುಲ್ಕ ಪಾವತಿಸಿ ನಿಮ್ಮ ಯಾತ್ರಾ ಪರ್ಮಿಟ್ ಡೌನ್ಲೋಡ್ ಮಾಡಿಕೊಳ್ಳಿ.
ಆಫ್ಲೈನ್ನಲ್ಲಿ ಹೋಗಲು ಬಯಸುವವರು SBI, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ಗಳ ನಿಯೋಜಿತ ಶಾಖೆಗಳ ಮೂಲಕವೂ ನೋಂದಾಯಿಸಿಕೊಳ್ಳಬಹುದು.
ಯಾತ್ರೆಗೆ ಕೊಂಡೊಯ್ಯಬೇಕಾದ ಪ್ರಮುಖ ದಾಖಲೆಗಳು
ಯಾತ್ರೆಯುದ್ದಕ್ಕೂ ಸುರಕ್ಷತೆ ಮತ್ತು ಟ್ರ್ಯಾಕಿಂಗ್ ಉದ್ದೇಶಕ್ಕಾಗಿ ಜಮ್ಮು ಅಥವಾ ಶ್ರೀನಗರದ ಕೌಂಟರ್‌ಗಳಲ್ಲಿ ಬಯೋಮೆಟ್ರಿಕ್ ಇ-ಕೆವೈಸಿ (eKYC) ಮುಗಿಸಿ RFID ಕಾರ್ಡ್ ಪಡೆದುಕೊಳ್ಳುವುದು ಕಡ್ಡಾಯ. ಇದನ್ನು ಸದಾ ಕುತ್ತಿಗೆಗೆ ಧರಿಸಿರಬೇಕು. ನಿಮ್ಮ ಮೂಲ ಆಧಾರ್ ಕಾರ್ಡ್ (NRI ಭಕ್ತರಾಗಿದ್ದರೆ ಪಾಸ್ಪೋರ್ಟ್), ಯಾತ್ರಾ ಪರವಾನಗಿ ಪತ್ರ, ವೈದ್ಯಕೀಯ ಪ್ರಮಾಣಪತ್ರ ಮತ್ತು 6 ಇತ್ತೀಚಿನ ಫೋಟೋಗಳನ್ನು ಕೈಯಲ್ಲಿಟ್ಟುಕೊಳ್ಳಿ.
ಅಮರನಾಥ ಗುಹೆಯ ಪಾವಿತ್ರ್ಯತೆ ಮತ್ತು ಅಮರತ್ವದ ರಹಸ್ಯ
ಹಿಮದ ಗುಹೆಯೊಳಗೆ ನೀರಿನ ಹನಿಗಳು ಹೆಪ್ಪುಗಟ್ಟಿ ಸ್ವಯಂಭೂ ಶಿವಲಿಂಗ ನಿರ್ಮಾಣವಾಗುವುದು ಜಗತ್ತಿನ ವಿಸ್ಮಯಗಳಲ್ಲೊಂದು. ಪೌರಾಣಿಕ ಹಿನ್ನೆಲೆ ಪ್ರಕಾರ, ಪರಶಿವನು ತನ್ನ ಅರ್ಧಾಂಗಿ ಪಾರ್ವತಿ ದೇವಿಗೆ ಸೃಷ್ಟಿ ಮತ್ತು ಅಮರತ್ವದ ರಹಸ್ಯವನ್ನು ಬೋಧಿಸಲು ಈ ಏಕಾಂತ ಗುಹೆಯನ್ನು ಆರಿಸಿಕೊಂಡಿದ್ದನು. ಶಿವನು ಕಥೆ ಹೇಳುವಾಗ ಅಲ್ಲಿ ರಹಸ್ಯವಾಗಿ ಅಡಗಿದ್ದ ಒಂದು ಜೋಡಿ ಪಾರಿವಾಳಗಳು ಆ ‘ಅಮರ ಕಥೆ’ಯನ್ನು ಕೇಳಿ ಅಮರತ್ವ ಪಡೆದವು ಎಂಬ ನಂಬಿಕೆಯಿದೆ. ಇಂದಿಗೂ ಅಪರೂಪಕ್ಕೆ ಭಕ್ತರಿಗೆ ಆ ಪಾರಿವಾಳಗಳು ದರ್ಶನ ನೀಡುತ್ತವೆ ಎನ್ನಲಾಗುತ್ತದೆ.
ಯಾತ್ರಾರ್ಥಿಗಳು ಪಾಲಿಸಲೇಬೇಕಾದ ಕಟ್ಟುನಿಟ್ಟಿನ ನಿಯಮಗಳು
ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ ಇರುವುದರಿಂದ ಮತ್ತು ಹವಾಮಾನ ಕ್ಷಣಕ್ಷಣಕ್ಕೂ ಬದಲಾಗುವುದರಿಂದ ಜೊತೆಯಲ್ಲಿ ಬೆಚ್ಚಗಿನ ಉಣ್ಣೆ ಬಟ್ಟೆಗಳು, ರೇನ್ ಕೋಟ್, ವಾಟರ್ಪ್ರೂಫ್ ಗಟ್ಟಿಯಾದ ಟ್ರೆಕ್ಕಿಂಗ್ ಶೂಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಿ.
ಯಾತ್ರೆಯ ಅವಧಿಯಲ್ಲಿ ಧೂಮಪಾನ, ಮದ್ಯಪಾನ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಲಗೇಜ್‌ಗಳನ್ನು ಹೊತ್ತು ಸಾಗಲು ಕುದುರೆ ಅಥವಾ ಪಲ್ಲಕ್ಕಿಗಳ ವ್ಯವಸ್ಥೆಯೂ ಲಭ್ಯವಿದೆ. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಹತ್ತಿರದ ಸೇನಾ ವೈದ್ಯಕೀಯ ಶಿಬಿರಗಳನ್ನು ಸಂಪರ್ಕಿಸಬೇಕು. ಭಕ್ತರು ಸುರಕ್ಷಿತವಾಗಿ ದರ್ಶನ ಪಡೆದು ಮರಳಲು SASB ಎಲ್ಲಾ ಸಿದ್ಧತೆಗಳನ್ನು ಮಾಡಿದೆ.





