ಚಾಮರಾಜನಗರ: ಕೊಳ್ಳೇಗಾಲದ ದಾಸನಪುರ ಬಳಿ ಕಾವೇರಿ ನದಿಯಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದ ಯೋಗಪಟು ನಾಗರಾಜ್ (78) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ನಾಗರಾಜ್ ಅವರು ತೀರ್ಥ ಸ್ನಾನಕ್ಕಾಗಿ ಕಾವೇರಿ ನದಿಗೆ ಇಳಿದಿದ್ದರು. 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದ ಅವರು, ನದಿಯ ನೀರಿನಲ್ಲಿ ಹಿಮ್ಮುಖವಾಗಿ ತೇಲುತ್ತಾ ಯೋಗ ನಿದ್ರೆಯಲ್ಲಿ ತೊಡಗಿದ್ದರು. ಆದರೆ 30 ನಿಮಿಷವಾದರೂ ಯಾವುದೇ ಚಲನೆಯಿಲ್ಲದೆ ಇರುವುದನ್ನು ಗಮನಿಸಿದ ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.
ಯೋಗಗುರು ನಾಗರಾಜ್ – ಕೊಳ್ಳೇಗಾಲದ ಖ್ಯಾತ ಯೋಗಪಟು
ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿ ನಾರಾಯಣ ದೇವಾಲಯದ ಬೀದಿಯಲ್ಲಿ ವಾಸಿಸುತ್ತಿದ್ದು, ಯುವಕರಿಗೆ ಮತ್ತು ವಯೋವೃದ್ಧರಿಗೆ ಯೋಗ ತರಬೇತಿ ನೀಡುತ್ತಿದ್ದರು. ಸದಾ ಪ್ರಫುಲ್ಲ ಮನಸ್ಕರಾಗಿದ್ದ ಅವರು ಕೊಳ್ಳೇಗಾಲದಲ್ಲಿ “ಯೋಗಗುರು” ಎಂದೇ ಪ್ರಸಿದ್ಧರಾಗಿದ್ದರು.
ನಿನ್ನೆ ತಮ್ಮ ಸ್ನೇಹಿತರೊಂದಿಗೆ ಕಾವೇರಿ ನದಿಗೆ ಹೋದಾಗ, ಅವರು ಪುಣ್ಯ ಸ್ನಾನಕ್ಕೆ ಮುಂದಾಗಿ ತೇಲುತ್ತಾ ಯೋಗ ಮಾಡುತ್ತಿದ್ದರು. ಆದರೆ ಯೋಗಾಭ್ಯಾಸವೇ ಅವರ ಅಂತಿಮ ಕ್ಷಣಗಳಾಗಿಬಿಟ್ಟಿತು. ಈ ಘಟನೆ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.