ಯಾದಗಿರಿ, ಮಾರ್ಚ್ 27: ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಉಪ್ಪರಗಡ್ಡಾ ಬಡಾವಣೆಯ ರಸ್ತೆಬದಿಯಲ್ಲಿ ಮಗುವಿನ ಮೃತದೇಹವನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ತಡರಾತ್ರಿ ಯಾರೋ ಅಪರಿಚಿತರು ಮಗುವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.\
ರಸ್ತೆಬದಿಯಲ್ಲಿ ಶವ ಪತ್ತೆ
ಗುರಮಿಠಕಲ್ ಪಟ್ಟಣದ ಉಪ್ಪರಗಡ್ಡಾ ಬಡಾವಣೆಯಲ್ಲಿ ಸ್ಥಳೀಯರು ಬೆಳಿಗ್ಗೆ ರಸ್ತೆಬದಿಯಲ್ಲಿ ನವಜಾತ ಶಿಶುವಿನ ಮೃತದೇಹ ಕಂಡು ಅತಂಕಗೊಂಡಿದರು. ತಕ್ಷಣವೇ ಈ ಘಟನೆ ಬಗ್ಗೆ ಪೊಲೀಸರಿಗೆ ವಿಚಾರ ತಿಳಿಸಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗುರಮಿಠಕಲ್ ಪೊಲೀಸರು ಮಹಜರು ನಡೆಸಿ ಪರಿಶೀಲನೆ ಮಾಡಿದ್ದಾರೆ.
ಮಗು ಹುಟ್ಟಿದ ಕೂಡಲೇ ಅಥವಾ ಹುಟ್ಟಿದ ಸ್ವಲ್ಪ ಸಮಯದಲ್ಲೇ ಇಲ್ಲಿ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿಯ ವೇಳೆ ಯಾರೋ ಇಲ್ಲಿಗೆ ತಂದು ಬಿಸಾಕಿ ಹೋಗಲಾಗಿದೆ. ಮಗುವನ್ನು ತಿಪ್ಪೆಯಲ್ಲಿ ಎಸೆದು ಹೋಗಿರಬಹುದು ಎಂದೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟಿರುವುದು ಗಂಡು ಮಗುವಾಗಿದೆ. ಅನೈತಿಕ ಸಂಬಂಧ ಅಥವಾ ಅಪ್ರಾಪ್ತ ಬಾಲಕಿಯ ಗರ್ಭಧಾರಣೆಯ ಹಿನ್ನೆಲೆಯಲ್ಲಿ ಮಗು ಜನಿಸಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ತನಿಖೆ
ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯಿಂದ ಮಗು ಜನಿಸಿದ ನಂತರವೇ ಸಾವನ್ನಪ್ಪಿದೆಯೇ ಅಥವಾ ತಾಯಿಯ ಗರ್ಭದಲ್ಲಿಯೇ ಮೃತಪಟ್ಟಿತ್ತೇ ಎಂಬುದು ಸ್ಪಷ್ಟವಾಗಲಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.





