ಬೆಂಗಳೂರು (ಏಪ್ರಿಲ್ 15, 2026): ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಸೇರಿದಂತೆ ಒಟ್ಟು 19 ಮಂದಿ ಆರೋಪಿಗಳು ದೋಷಿಗಳು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದೆ. ತೀರ್ಪು ಪ್ರಕಟವಾದ ತಕ್ಷಣವೇ, ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 19 ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ. ಈ ಮೂಲಕ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಮತ್ತೆ ಜೈಲು ಶಿಕ್ಷೆ ಖಚಿತವಾಗಿದೆ.
ಶಾಸಕ ಸ್ಥಾನಕ್ಕೆ ಕುತ್ತು
ಅಪರಾಧಿ ಎಂದು ತೀರ್ಪು ಬಂದ ಹಿನ್ನೆಲೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೂ ಕುತ್ತು ಎದುರಾಗಿದೆ. ನಾಳೆ ಶಿಕ್ಷೆಯ ಪ್ರಮಾಣ ಘೋಷಣೆಯಾದ ಬಳಿಕ ವಿನಯ್ ಕುಲಕರ್ಣಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕೋರ್ಟ್ ನ ಮಹತ್ವದ ತೀರ್ಪು
ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅವರಲ್ಲಿ ಇಬ್ಬರು ಮಾಫಿಸಾಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು 19 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ. ದೋಷಿಗಳ ಪಟ್ಟಿಯಲ್ಲಿ ಮುಖ್ಯವಾಗಿ ಎ15 ವಿನಯ್ ಕುಲಕರ್ಣಿ ಸೇರಿದ್ದಾರೆ. ಇನ್ನು, ಪ್ರಕರಣದ ಎ20 ವಾಸುದೇವ ನಿಲೇಕಣಿ ಮತ್ತು ಎ21 ಸೋಮಶೇಖರ ಅವರನ್ನು ನ್ಯಾಯಾಲಯವು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ಮಾಫಿಸಾಕ್ಷಿಗಳ ವಿವಾದ
ಪ್ರಕರಣದ ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದಾರೆ. ಎ17 ಶಿವಾನಂದ ಅವರು ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಎ17 ಅವರನ್ನು ಮತ್ತೆ ಆರೋಪಿಯನ್ನಾಗಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಇಬ್ಬರನ್ನು ಹೊರತುಪಡಿಸಿ ಉಳಿದ 19 ಮಂದಿಯ ತೀರ್ಪು ಪ್ರಕಟಿಸಲಾಗಿದೆ.
ಶಿಕ್ಷೆಯ ಪ್ರಮಾಣ ನಾಳೆ
ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣದ ಕುರಿತಾದ ವಾದ ಮಂಡನೆಯನ್ನು ಏಪ್ರಿಲ್ 16ರಂದು (ನಾಳೆ) ನಡೆಸಲಿದೆ. ನಾಳೆಯೇ ದೋಷಿಗಳಿಗೆ ಎಷ್ಟು ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದನ್ನು ಅಂತಿಮಗೊಳಿಸಲಾಗುವುದು.
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಉದಯ ಜಿಮ್‌ನಲ್ಲಿ ದುಷ್ಕರ್ಮಿಗಳು ಯೋಗೇಶ್ ಗೌಡರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಆರು ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಯೋಗೇಶ್ ಗೌಡರ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂತು. 2020ರ ನವೆಂಬರ್ 5ರಂದು ಸಿಬಿಐ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದ ವಿನಯ್ ಕುಲಕರ್ಣಿ, ಇಂದಿನ ತೀರ್ಪಿನ ಬಳಿಕ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ.




