ಬೆಂಗಳೂರು, ಜೂನ್ 30: ಸಿಲಿಕಾನ್ ಸಿಟಿಯಲ್ಲಿ ನೇಪಾಳಿಗರ ಪುಂಡಾಟಿಕೆ ಮತ್ತೆ ಮುಂದುವರೆದಿದ್ದು, ವಿಧಾನಸೌಧದ (Vidhana Soudha) ಮುಂಭಾಗದಲ್ಲೇ ಎರಡು ಗುಂಪುಗಳು ಹೊಡೆದಾಡಿಕೊಂಡಿರುವ ಆಘಾತಕಾರಿ ಘಟನೆ (Crime news) ಬೆಳಕಿಗೆ ಬಂದಿದೆ.
ಫೋಟೋ ವಿವಾದವೇ ಹೊಡೆದಾಟಕ್ಕೆ ಕಾರಣ
ಜೂನ್ 28 ರ ಭಾನುವಾರ ಸಂಜೆ ಸುಮಾರಿಗೆ ವಿಧಾನಸೌಧದ ಎದುರಿನ ಫುಟ್‌ಪಾತ್ (ಪಾದಚಾರಿ ಮಾರ್ಗ) ಮೇಲೆ ಈ ಗಲಾಟೆ ನಡೆದಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಓಡಾಡುವ ಜಾಗದಲ್ಲೇ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುವ ಸಣ್ಣ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿಯು ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿ ಗಲಾಟೆ ನಡೆದಿದೆ. ಸಾರ್ವಜನಿಕರ ಕಣ್ಣೆದುರೇ ಎರಡು ಗುಂಪುಗಳು ರಸ್ತೆಯಲ್ಲೇ ಮನಬಂದಂತೆ ಹೊಡೆದಾಡಿಕೊಂಡಿವೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರ ತ್ವರಿತ ಕಾರ್ಯಾಚರಣೆ
ವಿಧಾನಸೌಧದಂತಹ ಪ್ರಮುಖ ಸ್ಥಳದಲ್ಲಿ ಈ ರೀತಿಯ ಘಟನೆ ನಡೆದಿರುವುದು ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡು, ಸಾರ್ವಜನಿಕ ಸ್ಥಳದಲ್ಲಿ ದಾಂಧಲೆ ನಡೆಸಿ ಗಲಾಟೆ ಸೃಷ್ಟಿಸಿದ್ದ ನಾಲ್ವರು ನೇಪಾಳಿ ಮೂಲದ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಕಡ್ಡಾಯ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ವ್ಯಕ್ತಿ ಪುಂಡಾಟ
ಎಣ್ಣೆ ಕೊಡಿಸಿಲ್ಲ ಎಂದು ಸಣ್ಣ ವಿಷಯಕ್ಕೆ ಮಚ್ಚು ಹಿಡಿದು ನಡುರಸ್ತೆಯಲ್ಲೇ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗೌರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಸವರಾಜ್ ಎಂಬಾತ ಜನವರಿ 17ರಂದು ಮಧ್ಯಾಹ್ನದ ವೇಳೆ ಕುಡಿದ ಅಮಲಿನಲ್ಲಿ ಪರಿಚಯಸ್ಥ ಪ್ರಕಾಶ್ ಅವರ ಮೇಲೆ ಕೋಪಗೊಂಡಿದ್ದಾನೆ. ಎಣ್ಣೆ ಕೊಡಿಸಿಲ್ಲ ಎಂಬ ಸಣ್ಣ ಕಾರಣಕ್ಕೆ ಮಚ್ಚು ಹಿಡಿದ ಬಸವರಾಜ್, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ರಸ್ತೆಯಲ್ಲೇ ದಾಂದಲೆ ಮಾಡಿದ್ದಾನೆ. ತನ್ನ ದೇಹದಿಂದ ಬಟ್ಟೆ ತೆಗೆದು ಪುಂಡಾಟಕ್ಕೆ ಇಳಿದು ಓಡಾಡುತ್ತಿದ್ದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳಕ್ಕೆ ಸುದ್ದಿ ತಿಳಿದು ಆನೇಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಸವರಾಜ್ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಮತ್ತು ದಾಂದಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ಗ್ರಾಮದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದರೂ ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ, ಆದರೆ ಪೊಲೀಸರು ಕಡಿವಾಣ ಹಾಕುತ್ತಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಯದ ವಾತಾವರಣದಲ್ಲಿ ಇರುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.




