ದಾವಣಗೆರೆ, ಜುಲೈ 1: ಸುಮಾರು ಎರಡು ದಶಕಗಳಿಂದ ದೇಶದ ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸುತ್ತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಗೆ ಪರಿಷ್ಕೃತ ರೂಪವಾಗಿ ವಿಬಿ ಜಿ ರಾಮ್ ಜಿ (Viksit Bharat – Guarantee for Rozgar and Ajeevika Mission-Gramin) ಕಾಯ್ದೆ ಇಂದು ಜುಲೈ 1ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮನರೇಗ (MGNREGA)ಯನ್ನು VB-G RAM G ಎಂಬ ಹೊಸ ಮಾದರಿಯಲ್ಲಿ ಜಾರಿಗೊಳಿಸಿರುವ ಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಜಾರಿ ಅವೈಜ್ಞಾನಿಕವಾಗಿದೆ ಎಂದು ಟೀಕಿಸಿದರು.
ಮನರೇಗ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಳೆದ ಎರಡು ದಶಕಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ಗ್ರಾಮೀಣ ಕಾರ್ಮಿಕರು ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಖಂಡ್ರೆ ಹೇಳಿದರು.
“ಕೇಂದ್ರ ಸರ್ಕಾರ ಈಗ ಯೋಜನೆಯನ್ನು VB-G RAM G ಹೆಸರಿನಲ್ಲಿ ಜಾರಿಗೊಳಿಸಿದೆ. ಈ ಬದಲಾವಣೆಯಿಂದ ಜನರಿಗೆ ಯಾವ ರೀತಿಯ ಪ್ರಯೋಜನವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಯೋಜನೆಯ ಉದ್ದೇಶಕ್ಕಿಂತ ಅದರ ಅನುಷ್ಠಾನದಲ್ಲಿ ಬದಲಾವಣೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಯೋಜನೆಯ ಹಣಕಾಸು ಹಂಚಿಕೆ ಕುರಿತು ಮಾತನಾಡಿದ ಸಚಿವರು, ಈ ಹಿಂದೆ ಕೇಂದ್ರ ಮತ್ತು ರಾಜ್ಯದ ಪಾಲು 90:10 ಅನುಪಾತದಲ್ಲಿತ್ತು. ಈಗ ಅದನ್ನು 60:40ಕ್ಕೆ ಬದಲಾಯಿಸಿರುವುದರಿಂದ ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದರು.
“ಈ ವರ್ಷ ರಾಜ್ಯಕ್ಕೆ ₹5,730 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ಸುಮಾರು ₹3,800 ಕೋಟಿ ರಾಜ್ಯ ಸರ್ಕಾರವೇ ಭರಿಸಬೇಕಾಗಿದೆ. ಆದರೂ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಮತ್ತು ಕೂಲಿ ಪಾವತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಅನುದಾನವನ್ನು ಒದಗಿಸುತ್ತೇವೆ” ಎಂದು ಭರವಸೆ ನೀಡಿದರು.
ಇದೇ ವೇಳೆ, ಯೋಜನೆಯ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಆಕ್ಷೇಪವನ್ನು ಅಧಿಕೃತವಾಗಿ ದಾಖಲಿಸಲಿದ್ದು, ಈ ಕುರಿತು ಸಚಿವ ಸಂಪುಟದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಖಂಡ್ರೆ ತಿಳಿಸಿದರು.
ಇನ್ನೂ, ಈ ಹಿಂದೆ ಮನರೇಗ ಅಡಿಯಲ್ಲಿ ಅನುಮೋದನೆ ಪಡೆದಿದ್ದ 267 ಕಾಮಗಾರಿಗಳಲ್ಲಿ ಕೇವಲ 160 ಕಾಮಗಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಕಾಮಗಾರಿಗಳನ್ನು ಮುಂದುವರಿಸಲು ರಾಷ್ಟ್ರೀಯ ಮಟ್ಟದ ಸಭೆಯಲ್ಲಿಯೂ ಒತ್ತಾಯಿಸಲಾಗಿದೆ ಎಂದು ಸಚಿವರು ಹೇಳಿದರು.





