ಚಿಕ್ಕಮಗಳೂರು, ಜುಲೈ 1: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಪಂಚ ಗ್ಯಾರಂಟಿ ಯೊಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಮಾಹಿತಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಇದರಿಂದ ಅರ್ಹರಿಗೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
- ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ ಎಂದ ಸಚಿವ ಕೆ.ಜೆ. ಜಾರ್ಜ್
- ಮುಂದುವರಿಯಲಿದೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆ
- ಅನರ್ಹರು ಯೋಜನೆ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಪರಿಶೀಲನೆ
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್ ಅವರು, ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ರದ್ದುಪಡಿಸುವ ಅಥವಾ ಅದರ ಸೌಲಭ್ಯ ಕಡಿತಗೊಳಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಹೇಳಿದರು. ಯೋಜನೆಯಡಿ ಈಗಾಗಲೇ ಸುಮಾರು 1 ಕೋಟಿ 64 ಲಕ್ಷ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ನಿಜವಾದ ಅರ್ಹರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
“200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಈಗಲೂ ಅದೇ ವ್ಯವಸ್ಥೆ ಮುಂದುವರಿದಿದೆ. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ಅನರ್ಹರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳು ಸರ್ಕಾರಕ್ಕೆ ಬಂದಿವೆ. ಹೀಗಾಗಿ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲಾಗುತ್ತಿದೆ,” ಎಂದು ಸಚಿವರು ಹೇಳಿದರು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹೊಸ ಅರ್ಜಿ ಅಥವಾ ಪರಿಶೀಲನಾ ನಮೂನೆಯಲ್ಲಿ ಜಾತಿ ಮಾಹಿತಿಯನ್ನು ಕೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಜಾತಿ ಮಾಹಿತಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಕೇವಲ ದಾಖಲೆ ಉದ್ದೇಶಕ್ಕಾಗಿ ಮಾತ್ರ. ಇದರಿಂದ ಯಾರನ್ನೂ ಹೊರಗಿಡುವ ಉದ್ದೇಶ ಸರ್ಕಾರಕ್ಕಿಲ್ಲ. ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಯೋಜನೆಯ ಸೌಲಭ್ಯ ಮುಂದುವರಿಯುತ್ತದೆ,” ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಂಡಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ನಿಜವಾದ ಫಲಾನುಭವಿಗಳ ಪಟ್ಟಿ ಅಂತಿಮಗೊಳ್ಳಲಿದೆ. ಈ ಪ್ರಕ್ರಿಯೆಯ ಉದ್ದೇಶ ಯೋಜನೆಯ ಪಾರದರ್ಶಕತೆಯನ್ನು ಹೆಚ್ಚಿಸುವುದು ಹಾಗೂ ಸರ್ಕಾರಿ ಸೌಲಭ್ಯವು ಅರ್ಹರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದಾಗಿದೆ ಎಂದು ಸಚಿವರು ತಿಳಿಸಿದರು.
ಯೋಜನೆಯ ಪರಿಷ್ಕರಣೆ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಇದು ಯೋಜನೆಯನ್ನು ನಿಲ್ಲಿಸುವ ಕ್ರಮವಲ್ಲ, ಬದಲಿಗೆ ಯೋಜನೆಯ ದುರುಪಯೋಗ ತಡೆಯುವ ಆಡಳಿತಾತ್ಮಕ ಕ್ರಮವಾಗಿದೆ ಎಂದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.
ಈ ಮರುಪರಿಶೀಲನೆಯ ಪ್ರಮುಖ ಉದ್ದೇಶ ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸುವುದು ಹಾಗೂ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದರೆ ಅವುಗಳನ್ನು ಸರಿಪಡಿಸುವುದಾಗಿದೆ. ರಾಜ್ಯದ ಐದು ವಿದ್ಯುತ್ ಸರಬರಾಜು ಸಂಸ್ಥೆಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ ಈ ಯೋಜನೆಯ ಪರಿಷ್ಕರಣೆ ಅಭಿಯಾನ ನಡೆಸಲಾಗುತ್ತಿದೆ.





