ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಒತ್ತಡ ಹೆಚ್ಚಾಗುತ್ತಿದ್ದಂತೆ, ರಾಜ್ಯದ ಮುಂದಿನ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿವೆ. ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಕಾಂಗ್ರೆಸ್ ಹೋದರೆ ಉತ್ತಮ ಎಂಬ ಸಂದೇಶವನ್ನು ಆಪ್ತರು ರವಾನಿಸಿದ್ದಾರೆ. ದೇವರಾಜ ಅರಸು ಅವರ ದಾಖಲೆಯನ್ನು ಮುರಿಯುವ ನಿರೀಕ್ಷೆಯಲ್ಲಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ಧರಾಮಯ್ಯ ರಾಜಕೀಯ ನಿವೃತ್ತಿ?
ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಾ ಎಂಬ ಪ್ರಶ್ನೆ ಸದ್ಯದ ರಾಜಕೀಯದಲ್ಲಿ ಪ್ರಮುಖ ಚರ್ಚೆಯಾಗಿದ್ದು, ಅವರು ರಾಜಕೀಯ ನಿವೃತ್ತಿ ಹೊಂದಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿಯಿಂದ ಹಿಂಜರಿಯುವ ಪರಿಸ್ಥಿತಿ ಬಂದರೆ, ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣದಿಂದ ಸಂಪೂರ್ಣವಾಗಿ ದೂರ ಉಳಿಯಬಹುದು ಎಂದು ಅವರ ಆಪ್ತರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರು ಮಾತ್ರವಲ್ಲ, ಅವರ ಹಿತೈಷಿಗಳು ಕೂಡಾ ಅವರು ಸಕ್ರಿಯ ರಾಜಕಾರಣದಲ್ಲಿ ಇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಚುನಾವಣೆಗೆ ನಿಲ್ಲದಿರಲು ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ, ಆದರೆ ಜನರು, ಹಿತೈಷಿಗಳು ಮುಂದುವರೆಯಬೇಕೆಂದು ಒತ್ತಡ ಹಾಕುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಪ್ರಭಾವಶಾಲಿ ಹೇಳಿಕೆ
ಸಿದ್ಧರಾಮಯ್ಯ ಅವರ ಬಗ್ಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, “ಸಿದ್ದರಾಮಯ್ಯನವರು ನಮಗೆ ಬೇಕೇ ಬೇಕು. ಅವರು ಚುನಾವಣೆಗೆ ನಿಲ್ಲದಿದ್ದರೂ ರಾಜಕೀಯ ನಿವೃತ್ತಿಯಾದರೂ, ಅವರ ಅನುಭವ, ಮಾರ್ಗದರ್ಶನ ಕಾಂಗ್ರೆಸ್‌ಗೆ ಅಗತ್ಯ. ಮುಂದಿನ ನಾಯಕತ್ವವನ್ನು ಬೆಳೆಸುವವರೆಗೂ ಅವರು ಸಕ್ರಿಯ ರಾಜಕಾರಣದಲ್ಲಿ ಇರಲೇಬೇಕು,” ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತಂತೆ ಪ್ರತಿಕ್ರಿಯೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಖರ್ಗೆ ಅವರು ತೀರ್ಮಾನ ಕೈಗೊಳ್ಳುತ್ತಾರೆ. ಕರ್ನಾಟಕದ ಚರ್ಚೆ ಇನ್ನೂ ಆರಂಭವಾಗಿಲ್ಲ. ಇನ್ನೂ ನಿರ್ಧಾರಗಳು ಹೊರಬಂದಿಲ್ಲ,” ಎಂದು ಸ್ಪಷ್ಟಪಡಿಸಿದರು.