ರಾಯಚೂರು: ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸುವ ಅತ್ಯಂತ ಅಪರೂಪದ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ತಿಂಗಳ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದೆ. ಸಯಾಮಿ ಅವಳಿಗಳ ಪ್ರಕರಣಗಳಿಗಿಂತಲೂ ವಿಭಿನ್ನವಾದ ಈ ಅಪರೂಪದ ವೈದ್ಯಕೀಯ ಸ್ಥಿತಿ ವೈದ್ಯರನ್ನು ಅಚ್ಚರಿಗೊಳಿಸಿದೆ.
ರಾಯಚೂರಿನ ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ್ ಮತ್ತು ಅವರ ತಂಡದ ಪರಿಶೀಲನೆಯಿಂದ ಈ ಪ್ರಕರಣ ಪತ್ತೆಯಾಗಿದ್ದು, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ರಾಯಚೂರು ಮೂಲದ ದಂಪತಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದರು. ಈ ಪೈಕಿ ಒಂದು ಮಗು ನಿರಂತರ ಹೊಟ್ಟೆ ನೋವು, ವಾಂತಿ ಹಾಗೂ ಬೇಧಿಯಿಂದ ಬಳಲುತ್ತಿತ್ತು. ಮಗುವಿನ ಆರೋಗ್ಯದಲ್ಲಿ ಪದೇಪದೇ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಪೋಷಕರು ರಾಯಚೂರಿನ ಸಿಂಧನೂರು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ್ ಅವರು ಮಗುವಿನ ಆರೋಗ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ.
ಸತತ ಸ್ಕ್ಯಾನಿಂಗ್‌ನಲ್ಲೂ ಪತ್ತೆಯಾಗದ ವಿಚಿತ್ರ ಸ್ಥಿತಿ!
ಮಗುವಿನ ಹೊಟ್ಟೆ ನೋವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವೈದ್ಯರು ಹಲವು ಹಂತಗಳಲ್ಲಿ ತಪಾಸಣೆ ನಡೆಸಿದ್ದಾರೆ. ಆರಂಭಿಕ ಪರೀಕ್ಷೆಗಳು ಹಾಗೂ ಸ್ಕ್ಯಾನಿಂಗ್‌ನಲ್ಲೂ ಸಮಸ್ಯೆಯ ಸ್ಪಷ್ಟ ಕಾರಣ ಪತ್ತೆಯಾಗಿರಲಿಲ್ಲ. ಹೀಗಾಗಿ ಮಗುವಿನ ವೈದ್ಯಕೀಯ ಇತಿಹಾಸವನ್ನು ಆಧರಿಸಿ ಹೆಚ್ಚಿನ ಪರಿಶೀಲನೆ ನಡೆಸಲು ವೈದ್ಯರ ತಂಡ ನಿರ್ಧರಿಸಿತು.
ಈ ವೇಳೆ ಮಗುವಿನ ಹೊಟ್ಟೆಯ ಸತತ ಸ್ಕ್ಯಾನಿಂಗ್ ನಡೆಸಿದಾಗ ವೈದ್ಯಕೀಯ ಲೋಕದ ಅಪರೂಪದ ಸಂಗತಿ ಬೆಳಕಿಗೆ ಬಂದಿದೆ. ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಇರುವುದು ಪತ್ತೆಯಾಗಿದೆ. ಇದು ಸಾಮಾನ್ಯ ಹೊಟ್ಟೆಯ ಗಡ್ಡೆಯಲ್ಲ, ಬೆಳವಣಿಗೆಯ ಲಕ್ಷಣಗಳನ್ನು ಹೊಂದಿರುವ ಭ್ರೂಣ ಎಂಬುದು ವೈದ್ಯರ ಗಮನಕ್ಕೆ ಬಂದಿದೆ.
ಭ್ರೂಣದೊಳಗೆ ಬೆನ್ನುಹುರಿ, ಕೂದಲು, ಉಗುರುಗಳ ಬೆಳವಣಿಗೆ!
ವೈದ್ಯರ ಪರಿಶೀಲನೆಯಲ್ಲಿ ಮಗುವಿನ ಹೊಟ್ಟೆಯೊಳಗಿದ್ದ ಭ್ರೂಣಕ್ಕೆ ಬೆನ್ನುಹುರಿ ಸೇರಿದಂತೆ ದೇಹದ ಕೆಲವು ಅಂಗಾಂಗಗಳು ಬೆಳೆದಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಕೂದಲು ಮತ್ತು ಉಗುರುಗಳ ಬೆಳವಣಿಗೆಯೂ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಎರಡು ತಿಂಗಳ ಮಗುವಿನ ಲಿವರ್ ಮೂಲಕ ಈ ಭ್ರೂಣಕ್ಕೆ ರಕ್ತ ಪೂರೈಕೆಯಾಗುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ಮಗುವಿನ ಹೊಟ್ಟೆಯೊಳಗಿದ್ದ ಭ್ರೂಣವೂ ಕ್ರಮೇಣ ಬೆಳವಣಿಗೆ ಹೊಂದುತ್ತಿತ್ತು. ಈ ಅಪರೂಪದ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಫೀಟಸ್ ಇನ್ ಫೀಟು’ (Fetus in Fetu) ಎಂದು ಕರೆಯಲಾಗುತ್ತದೆ.
ರಾಜ್ಯದಲ್ಲಿ ಮೂರನೇ ಪ್ರಕರಣ, ದೇಶದಲ್ಲಿ 230ನೇ ಕೇಸ್!
ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ್, ಇಂತಹ ವೈದ್ಯಕೀಯ ಸ್ಥಿತಿಗಳು ಅತ್ಯಂತ ವಿರಳವಾಗಿ ಕಂಡುಬರುತ್ತವೆ ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ಕರ್ನಾಟಕದಲ್ಲಿ ವರದಿಯಾದ ಇಂತಹ ಪ್ರಕರಣಗಳಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ದೇಶದಲ್ಲಿ ಸುಮಾರು 230ನೇ ಪ್ರಕರಣ ಎಂದು ಹೇಳಿದ್ದಾರೆ.
ವೈದ್ಯರ ವೃತ್ತಿಜೀವನದಲ್ಲಿ ಇಂತಹ ಅಪರೂಪದ ಪ್ರಕರಣವನ್ನು ಗುರುತಿಸಿ ಚಿಕಿತ್ಸೆ ನೀಡುವ ಅವಕಾಶ ಸಿಗುವುದು ವಿಶೇಷ ಅನುಭವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಗುವಿನ ಆರೋಗ್ಯ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ನಡೆಸಿದ ಸತತ ಪರಿಶೀಲನೆಯೇ ಈ ವೈದ್ಯಕೀಯ ವಿಸ್ಮಯವನ್ನು ಗುರುತಿಸಲು ನೆರವಾಗಿದೆ.
ಬಳ್ಳಾರಿ ವಿಮ್ಸ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದ ಬಳಿಕ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ತಜ್ಞ ವೈದ್ಯರ ತಂಡ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆದಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಎರಡು ತಿಂಗಳ ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಮಗುವಿನ ಆರೋಗ್ಯದ ಬಗ್ಗೆ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.





