ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ದಾಖಲಾಗಿರುವ ಪೋಕ್ಸೋ (POCSO) ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಲ್ಲಿಕಾರ್ಜುನ ಮುತ್ಯಾ ಅವರು ಈಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆಯಾಗಿದ್ದು, ಬರುವ ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ.
ಪ್ರಮುಖವಾಗಿ, ಅಪ್ರಾಪ್ತ ಬಾಲಕಿಯ ಪೋಷಕರು ಯಾವುದೇ ದೂರು ನೀಡಿಲ್ಲದಿದ್ದರೂ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ. ಕಾನೂನು ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬ ಕಾರಣ ನೀಡಿ ಪ್ರಕರಣಕ್ಕೆ ತಡೆ ಕೋರಲಾಗಿದೆ.
ಇತ್ತ ಮಠದ ಆವರಣದಲ್ಲಿ ಭಕ್ತರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಪಕ್ಷಾತೀತವಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಬೆಂಬಲಕ್ಕೆ ನಿಂತಿರುವುದು ವಿಶೇಷ.
ಸಭೆಯ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಲಲಿತಾ ಮತ್ತು ಮಠದ ಭಕ್ತರು, ಬಾಲಕಿಯ ಪೋಷಕರು ದೂರು ನೀಡದಿದ್ದರೂ, ಬಾಲಕಿಯ ಹೇಳಿಕೆ ಪಡೆಯದೆಯೇ ಪ್ರಕರಣ ದಾಖಲಿಸಿರುವುದು ಜಿಲ್ಲಾಡಳಿತದ ಎಡವಟ್ಟು ಎಂದು ಆರೋಪಿಸಿದ್ದಾರೆ.
ಮುಂದಿನ ಎರಡು ದಿನಗಳೊಳಗೆ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.ಜಿಲ್ಲಾಡಳಿತವು ತನಿಖೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ಕೇಸ್ ಹಿಂಪಡೆಯದಿದ್ದರೆ ಜಿಲ್ಲೆಯಾದ್ಯಂತ ಭಕ್ತರು ರಸ್ತೆಗಿಳಿದು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ
ವಿಚಾರಣೆಗೆ ಗೈರು: ಅಜ್ಞಾತ ಸ್ಥಳದಿಂದ ವೀಡಿಯೋ ಸಂದೇಶ
ಪೊಲೀಸರು ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾ ಅವರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಪ್ರಕರಣ ದಾಖಲಾದ ದಿನದಿಂದಲೂ ಅವರು ನಾಪತ್ತೆಯಾಗಿದ್ದು, ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಈ ನಡುವೆ ಅಜ್ಞಾತ ಸ್ಥಳದಿಂದ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ತಮ್ಮ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಬಾಲಕಿಯ ಪೋಷಕರು ಕೂಡ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋವನ್ನು ತಿರುಚಲಾಗಿದೆ (Edited Video) ಎಂದು ಅವರು ಆರೋಪಿಸಿದ್ದು, ಮಠದ ಮೇಲೆ ನಮಗೆ ಗೌರವವಿದೆ ಎಂದು ಹೇಳಿದ್ದಾರೆ.





