ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ,ಅಲ್ಲಿನ ಮಹಿಳೆಯರ ಜೊತೆಗೆ ಸಂವಾದ ನಡೆಸಿದ್ದಾರೆ.
ನಿರ್ಮಲಾ ಸೀತಾರಾಮನ್, ಕೂಡ್ಲಿಗಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ನಡೆದ ಹುಣಸೆ ಘಟಕ ಲೋಕಾರ್ಪಣೆ ಕಾರ್ಯಕ್ರಮದ ನಂತರ, ಸಚಿವೆ ಕಸಾಪುರ ಗ್ರಾಮದಲ್ಲಿ ಶೇಂಗಾ ಸಂಸ್ಕರಣ ಘಟಕ ಮತ್ತು ಹುಣಸೆ ಸಂಸ್ಕರಣ ಘಟಕಕ್ಕೆ ಚಾಲನೆ ನೀಡಿದ ನಂತರ ಮಹದೇವಪುರ ಗ್ರಾಮಕ್ಕೆ ಭೇಟಿ ನೀಡಿದ್ದರು.
ಮಹದೇವಪುರ ಗ್ರಾಮದಲ್ಲಿ ಸಚಿವೆ ಅವರು ಸ್ಥಳೀಯ ಮಹಿಳೆಯರೊಂದಿಗೆ ನೇರವಾಗಿ ನೆಲದ ಮೇಲೆ ಕುಳಿತು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಅವರು ಮಹಿಳೆಯರೊಂದಿಗೆ ಶೇಂಗಾ ಸುಲಿಯುತ್ತಾ ಚರ್ಚಿಸಿದರು. ಇದರಿಂದ ಮಹಿಳೆಯರು ತಮ್ಮ ಸಮಸ್ಯೆ ಮತ್ತು ತಮಗಿರುವ ಕೆಲವು ಅನುಮಾನಗಳನ್ನ ನೇರವಾಗಿ ಸಚಿವೆ ಜೊತೆ ಚರ್ಚಿಸಲು ಸಹಾಯವಾಯಿತು.
ಕೇಂದ್ರ ಸಚಿವೆ ಅವರ ಈ ಭೇಟಿಯು ಗ್ರಾಮೀಣ ಕರ್ನಾಟಕದ ಕೃಷಿ ಸಮುದಾಯಕ್ಕೆ ಸರ್ಕಾರದ ಬೆಂಬಲವನ್ನು ಸೂಚಿಸುತ್ತದೆ. ಶೇಂಗಾ ಮತ್ತು ಹುಣಸೆ ಸಂಸ್ಕರಣ ಘಟಕಗಳ ಲೋಕಾರ್ಪಣೆಯು ಪ್ರದೇಶದ ಕೃಷಿ-ಆಧಾರಿತ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವುದರ ಜೊತೆಗೆ ಸ್ಥಳೀಯರಿಗೆ ರೋಜಗಾರದ ಅವಕಾಶಗಳನ್ನು ಸೃಷ್ಟಿಸಲಿದೆ.