2025 ಮುಗಿದು 2026ರ ಹೊಸ ಆಗಮನವನ್ನು ಸ್ವಾಗತಿಸಲು ಇಡೀ ರಾಜ್ಯವೇ ಸಜ್ಜಾಗುತ್ತಿದೆ. ಆದರೆ, ಹೊಸ ವರ್ಷದ ಆಚರಣೆಯ ನೆಪದಲ್ಲಿ ನಡೆಯುವ ಮೋಜು-ಮಸ್ತಿ, ಅನಾಹುತಗಳನ್ನ ತಪ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಬೆಂಗಳೂರಿಗರ ನೆಚ್ಚಿನ ತಾಣ ನಂದಿ ಬೆಟ್ಟಕ್ಕೆ ಈ ಬಾರಿ ಪ್ರವೇಶ ನಿಷೇಧಿಸಿರುವುದು ಪ್ರವಾಸಿಗರಿಗೆ ಕೊಂಚ ನಿರಾಸೆ ಮೂಡಿಸಿದೆ.
ನಂದಿ ಬೆಟ್ಟಕ್ಕೆ ಪ್ರವೇಶ ಬಂದ್:
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಹೊಸ ವರ್ಷದ ಹಿಂದಿನ ದಿನ ಅಂದರೆ ಡಿ.31 ರಂದು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿರುವಂತೆ, ಡಿಸೆಂಬರ್ 31, 2025ರ ಮಧ್ಯಾಹ್ನದಿಂದ ಜನವರಿ 01, 2026ರ ಮಧ್ಯಾಹ್ನದವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು ಮತ್ತು ಬೆಟ್ಟದ ಕಡಿದಾದ ರಸ್ತೆಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ರೆಸಾರ್ಟ್ ಮತ್ತು ಹೋಟೆಲ್‌ಗಳ ಮೇಲೆ ನಿಗಾ:
ನಂದಿ ಬೆಟ್ಟದ ಸುತ್ತಮುತ್ತಲಿನ ಹೋಟೆಲ್‌ಗಳು, ಹೋಮ್ ಸ್ಟೇಗಳು ಮತ್ತು ರೆಸಾರ್ಟ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮೋಜು-ಮಸ್ತಿಯ ಹೆಸರಿನಲ್ಲಿ ಕಾನೂನನ್ನ ಕಡೆಗಣಿಸಿ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಪ್ರಕರಣ ದಾಖಲಿಸಲಾಗುವುದು. ಬಾರ್ ಮತ್ತು ರೆಸ್ಟೋರೆಂಟ್‌ಗಳು ನಿಗದಿತ ಸಮಯಕ್ಕೆ ಸರಿಯಾಗಿ ವ್ಯವಹಾರ ಸ್ಥಗಿತಗೊಳಿಸಬೇಕೆಂದು ಆದೇಶಿಸಲಾಗಿದೆ. ಇನ್ನು ಇತ್ತೀಚೆಗೆ ಪ್ರಸಿದ್ಧವಾಗಿರುವ ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್ (ಆದಿಯೋಗಿ) ಗೂ ಸಾವಿರಾರು ಭಕ್ತರು ಬರುವ ನಿರೀಕ್ಷೆಯಿದ್ದು, ಅಲ್ಲಿಯೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹೈ-ಅಲರ್ಟ್:
ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಸಂಭವಿಸುವ ಅಪಘಾತಗಳನ್ನ ತಡೆಯಲು ಪೊಲೀಸರು ತಯಾರಾಗಿದ್ದು, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದಾಗಿ ಬೈಕ್ ರೈಡ್ ಮಾಡುವ ಮೂಲಕ ಕೋರಮಂಗಲ ಸೇರಿದಂತೆ ಪ್ರಮುಖ ಏರಿಯಾಗಳ ಭದ್ರತೆಯನ್ನು ಪರಿಶೀಲಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಚಲನವಲನದ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ.
ಪಿಜಿ (PG) ಮಾಲೀಕರಿಗೆ ಕಟ್ಟುನಿಟ್ಟಿನ ರೂಲ್ಸ್:
ಬೆಂಗಳೂರಿನ ಪೇಯಿಂಗ್ ಗೆಸ್ಟ್ (PG) ನಿವಾಸಿಗಳಿಗೆ ಪೊಲೀಸರು ಈ ಬಾರಿ ವಿಶೇಷ ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳೆಂದರೆ,
-
ಪಿಜಿ ಮುಂಭಾಗದ ರಸ್ತೆಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವಂತಿಲ್ಲ.
-
ಮಹಿಳಾ ಪಿಜಿಗಳಿಗೆ ಶುಭ ಕೋರಲು ಬರುವ ಪುರುಷರಿಗೆ ಪ್ರವೇಶಾವಕಾಶ ನೀಡಬಾರದು.
-
ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ನೇರವಾಗಿ ಪಿಜಿ ಮಾಲೀಕರೇ ಹೊಣೆಗಾರರಾಗುತ್ತಾರೆ.
ಒಟ್ಟಾರೆಯಾಗಿ, 2026ರ ಸ್ವಾಗತವು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ನಡೆಯಲಿ ಎಂಬುದು ಪೊಲೀಸ್ ಇಲಾಖೆಯ ಆಶಯವಾಗಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಿ ಸಹಕರಿಸಬೇಕೆಂದು ಕೋರಲಾಗಿದೆ.





