ಕಸ್ತೂರಿರಂಗನ್ ವರದಿ ಅನುಷ್ಠಾನ ವಿರೋಧಿಸಿ ರೈತ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಇಂದು (ಸೆಪ್ಟೆಂಬರ್ 21) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣ ಬಂದ್‌ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದ್ದು, ಈ ಅವಧಿಯಲ್ಲಿ ಶೃಂಗೇರಿ ತಾಲೂಕಿನಲ್ಲಿ ವ್ಯಾಪಾರ-ವಹಿವಾಟು ಸೇರಿದಂತೆ ಹಲವು ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನೂ ಆಯೋಜಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಮಲೆನಾಡಿನ ಹಲವು ಭಾಗಗಳಲ್ಲಿ ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇದೀಗ ಶೃಂಗೇರಿಯಲ್ಲೂ ಹೋರಾಟ ತೀವ್ರಗೊಂಡಿದೆ.
ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಕಾಫಿನಾಡಿನ 137ಕ್ಕೂ ಹೆಚ್ಚು ಗ್ರಾಮಗಳು ಬರಲಿವೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ. ವರದಿ ಜಾರಿಯಾದರೆ ಮಲೆನಾಡಿನ ರೈತರು, ಸ್ಥಳೀಯ ನಿವಾಸಿಗಳು ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂದು ರೈತ ಸಂಘಟನೆಗಳು ಮತ್ತು ವಿವಿಧ ಸ್ಥಳೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಇತ್ತೀಚೆಗೆ ಸೆಪ್ಟೆಂಬರ್ 19ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ರೈತರು ಮತ್ತು ಸ್ಥಳೀಯ ಶಾಸಕರೊಂದಿಗೆ ಕಸ್ತೂರಿರಂಗನ್ ವರದಿ ಕುರಿತು ಸಂವಾದ ನಡೆಸಿದ್ದರು. ಇದರ ಬೆನ್ನಲ್ಲೇ ಶೃಂಗೇರಿಯಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗುತ್ತಿದೆ.
ಇಂದು ಬೆಳಗ್ಗೆ 10 ಗಂಟೆಗೆ ಶೃಂಗೇರಿಯ ಕುವೆಂಪು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಲಿದೆ. ಶೃಂಗೇರಿಯ ವಿವಿಧ ಭಾಗಗಳಿಂದ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳು ಮನವಿ ಮಾಡಿವೆ. ಬಂದ್ ಹಿನ್ನೆಲೆಯಲ್ಲಿ ಶೃಂಗೇರಿಗೆ ಪ್ರವಾಸ ಕೈಗೊಳ್ಳುವವರು ಸಹಕರಿಸಬೇಕು ಹಾಗೂ ಸಾಧ್ಯವಾದರೆ ಪ್ರವಾಸವನ್ನು ಮುಂದೂಡಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.
ಕಸ್ತೂರಿರಂಗನ್ ವರದಿ ಎಂದರೇನು?
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವ ಉದ್ದೇಶದಿಂದ ಕಸ್ತೂರಿರಂಗನ್ ಸಮಿತಿ ವರದಿ ರೂಪಿಸಲಾಗಿತ್ತು. ಮಾಧವ ಗಾಡ್ಗಿಲ್ ಸಮಿತಿಯ ವರದಿ ಬಳಿಕ, ಅದರ ಶಿಫಾರಸುಗಳನ್ನು ಪರಿಶೀಲಿಸಲು 2012ರಲ್ಲಿ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿತ್ತು.
ವರದಿಯಲ್ಲಿ ಪಶ್ಚಿಮ ಘಟ್ಟಗಳ ಒಟ್ಟು ಪ್ರದೇಶದ ಸುಮಾರು ಶೇ.37ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸಲು ಶಿಫಾರಸು ಮಾಡಲಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಮರಳು ಗಣಿಗಾರಿಕೆ, ಬೃಹತ್ ಉಷ್ಣ ವಿದ್ಯುತ್ ಯೋಜನೆಗಳು ಹಾಗೂ ಹೆಚ್ಚಿನ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳಂತಹ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ. ಸ್ಥಳೀಯ ಕೃಷಿ, ತೋಟಗಾರಿಕೆ ಹಾಗೂ ಜನವಸತಿ ಪ್ರದೇಶಗಳಿಗೆ ಸಂಬಂಧಿಸಿದ ಅಂಶಗಳನ್ನೂ ವರದಿಯಲ್ಲಿ ಪರಿಗಣಿಸಲಾಗಿದೆ.
ಕರ್ನಾಟಕದಲ್ಲಿ ಏಕೆ ವಿರೋಧ?
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಹಲವು ಪ್ರದೇಶಗಳು ಪ್ರಸ್ತಾವಿತ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ವರದಿ ಜಾರಿಯಾದರೆ ಕೃಷಿ, ತೋಟಗಾರಿಕೆ, ಮನೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಬಂಧಗಳು ಎದುರಾಗಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವರದಿ ಅನುಷ್ಠಾನಗೊಳಿಸಬಾರದು ಹಾಗೂ ಸ್ಥಳೀಯ ಜನರ ಜೀವನೋಪಾಯ ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಒತ್ತಾಯವಾಗಿದೆ. ಕೇಂದ್ರದ ಕರಡು ಅಧಿಸೂಚನೆಯ ಬಳಿಕ ಕಸ್ತೂರಿರಂಗನ್ ವರದಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದೆ.





