`ಗೀತಾ’ ಹಾಗೂ ‘ಕರ್ಣ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಮನೆ ಮಾಡಿದೆ. ಭವ್ಯಾ ಗೌಡ ಅವರ ಹಿರಿಯ ಸಹೋದರಿ ದಿವ್ಯಾ ಗೌಡ ಹೇಮಂತ್ ಕುಮಾರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ.
ದಿವ್ಯಾ ಗೌಡ ಅವರ ಪತಿ ಹೇಮಂತ್ ಕುಮಾರ್ ಅವರು ಕೂಡ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಷ್ಠಿತ ಎಂಡಮೋಲ್ ಶೈನ್ ಸಂಸ್ಥೆಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಅವರು, ‘ಬಿಗ್ ಬಾಸ್ ಕನ್ನಡ’ ಸೇರಿದಂತೆ ಹಲವು ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳಿಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾ ಮತ್ತು ಹೇಮಂತ್ ನಡುವೆ ಪರಿಚಯ ಬೆಳೆದಿದ್ದು, ಬಳಿಕ ಈ ಪರಿಚಯ ಪ್ರೀತಿಗೆ ತಿರುಗಿತು ಎನ್ನಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಶುರುವಾದ ಪರಿಚಯ?
ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಯಾಗಿದ್ದ ಸಂದರ್ಭದಲ್ಲಿ ನಡೆದ ಫ್ಯಾಮಿಲಿ ವೀಕ್‌ನಲ್ಲಿ ದಿವ್ಯಾ ಗೌಡ ಅವರು ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ತಂಡದೊಂದಿಗೆ ದಿವ್ಯಾ ಅವರಿಗೆ ಇದ್ದ ಸಂಪರ್ಕದ ಮೂಲಕ ಹೇಮಂತ್ ಕುಮಾರ್ ಅವರ ಪರಿಚಯವಾಗಿತ್ತು ಎನ್ನಲಾಗಿದೆ. ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದು, ಕ್ರಮೇಣ ಪ್ರೀತಿಯಾಗಿ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಜೋಡಿ ತಮ್ಮ ಪ್ರೀತಿಗೆ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯ ಮುದ್ರೆ ಒತ್ತಿದ್ದು, ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದೆ.
ಅದ್ಧೂರಿಯಾಗಿ ನಡೆದ ಆರತಕ್ಷತೆ
ದಿವ್ಯಾ ಗೌಡ ಮತ್ತು ಹೇಮಂತ್ ಕುಮಾರ್ ಅವರ ವಿವಾಹದ ಹಿನ್ನೆಲೆಯಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವೂ ನಡೆದಿದೆ. ಈ ಶುಭ ಸಮಾರಂಭಕ್ಕೆ ಕಿರುತೆರೆ ಮತ್ತು ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದ್ದಾರೆ. ನಟ ಧನುಷ್ ಗೌಡ ಸೇರಿದಂತೆ ಹಲವು ನಟ-ನಟಿಯರು ಹಾಗೂ ಆಪ್ತ ಸ್ನೇಹಿತರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಕ್ಕೆ ಮೆರುಗು ತಂದಿದ್ದಾರೆ.
ಇದಕ್ಕೂ ಮುನ್ನ ದಿವ್ಯಾ ಅವರ ಹಳದಿ ಮತ್ತು ಮೆಹಂದಿ ಶಾಸ್ತ್ರಗಳು ಕೂಡ ಅದ್ಧೂರಿಯಾಗಿ ನಡೆದಿದ್ದವು. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳ ಗಮನ ಸೆಳೆದಿವೆ.
ಅಕ್ಕ ದಿವ್ಯಾ ಗೌಡ ಅವರ ಹಳದಿ ಶಾಸ್ತ್ರ ಮತ್ತು ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಭವ್ಯಾ ಗೌಡ ಕೂಡ ವಿಶೇಷ ಡಿಸೈನರ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಲುಕ್‌ನ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.





