ಭಟ್ಕಳ (ಉತ್ತರ ಕನ್ನಡ): ಕಪ್ಪೆ ಚಿಪ್ಪು (ಮಸ್ಸೆಲ್) ಆರಿಸಲು ಹೋಗಿ ಸಂಭವಿಸಿದ ಘೋರ ದುರಂತದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಈ ಘಟನೆ ನಡೆದಿತ್ತು. ಇಂದು ನದಿಯಲ್ಲಿ ಶೋಧಕಾರ್ಯ ಮುಂದುವರೆಸಿದಾಗ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆಯಿಂದಲೇ ಎನ್‌ಡಿಆರ್‌ಎಫ್ ಹಾಗೂ ಈಶ್ವರ ಮಲ್ಪೆ ತಂಡಗಳು ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದವು. ಈ ವೇಳೆ ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ಪತ್ತೆಯಾಗಿದೆ. ಇನ್ನೂ ಒಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮೃತರಾದ ಮಾದೇವ್ ನಾಯ್ಕ್ ಹಾಗೂ ಲಕ್ಷ್ಮೀ ನಾಯ್ಕ್ ದಂಪತಿ ಇಬ್ಬರೂ ನೀರುಪಾಲಾಗಿದ್ದು, ಅವರ ಮಕ್ಕಳಾದ ದರ್ಶನ (23) ಮತ್ತು ಕೀರ್ತನಾ (20) ಅನಾಥರಾಗಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಒಂದೇ ಘಟನೆಯಲ್ಲಿ ಕಳೆದುಕೊಂಡಿರುವ ಈ ಯುವಕರ ಸ್ಥಿತಿ ಕಣ್ಣೀರು ತರಿಸುವಂತಿದೆ.
ಇದೇ ದುರಂತದಲ್ಲಿ ಮೃತಪಟ್ಟ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಬದುಕಿನ ಕಥೆಯೂ ದುಃಖಭರಿತವಾಗಿದೆ. ಅವರ ಪತಿ ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಾಲ್ವರು ಮಕ್ಕಳಿಗೆ ತಾಯಿಯೇ ಆಧಾರವಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಿದ್ದ ಮಕ್ಕಳನ್ನು ಸಾಕಿ ಬೆಳೆಸುತ್ತಿದ್ದ ತಾಯಿಯೂ ಇದೀಗ ಇಲ್ಲದಂತಾಗಿದೆ.
ಮೃತರಾದ ಮಾಸ್ತಮ್ಮ ನಾಯ್ಕ್ ಅವರು ನೀರಿನಲ್ಲಿ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಳುಗಲು ಆರಂಭಿಸಿದ್ದರು. ಇದನ್ನು ಗಮನಿಸಿದ ಅವರ ಮಗ ಉಮೇಶ್ ನಾಯ್ಕ್ ತಕ್ಷಣವೇ ತಾಯಿಯನ್ನು ರಕ್ಷಿಸಲು ನೀರಿಗೆ ಹಾರಿದ್ದರು. ತಾಯಿಯನ್ನು ಎಳೆಯಲು ಪ್ರಯತ್ನಿಸಿದರೂ ನೀರಿನ ಹೊಳೆ ತೀವ್ರವಾಗಿದ್ದರಿಂದ ಇಬ್ಬರನ್ನೂ ಉಳಿಸಲು ಸಾಧ್ಯವಾಗಲಿಲ್ಲ.
ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ಅವರ ಪ್ರಕಾರ, ತಾಯಿಯನ್ನು ರಕ್ಷಿಸಲು ಹೋದ ಉಮೇಶ್ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮನ್ನು ರಕ್ಷಿಸಬೇಕೆಂದು ಅವರ ಕಾಲು ಹಿಡಿದಿದ್ದಾರೆ. ಇದರಿಂದ ಸಮತೋಲನ ಕಳೆದುಕೊಂಡ ಉಮೇಶ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.





