ಮಂಡ್ಯ: ಮಳೆಯ ಕೊರತೆಯಿಂದ ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ತೀವ್ರ ನೀರಿನ ಅಭಾವ ಎದುರಾಗಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚನೆ ನೀಡಿದ್ದು, ಮಂಡ್ಯ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆದೇಶ ಹಿಂಪಡೆಯದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಆರಂಭಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೇ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವುದು ರೈತರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಹಿತಾರಕ್ಷಣಾ ಸಮಿತಿಗಳು ಪ್ರತಿಭಟನೆಗೆ ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಈ ಹಿನ್ನೆಲೆ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ, ಪ್ರಮುಖ ಸರ್ಕಾರಿ ಕಚೇರಿಗಳು ಹಾಗೂ ಪ್ರತಿಭಟನೆ ನಡೆಯುವ ಸಾಧ್ಯತೆಯಿರುವ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಲು ಅವಕಾಶ ನೀಡುವ ಜೊತೆಗೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಕೇವಲ 12 ಟಿಎಂಸಿ ಮಾತ್ರ ಇದೆ ಎನ್ನಲಾಗಿದೆ. ಆದರೆ CWRC ಆದೇಶದಂತೆ ಮುಂದಿನ 15 ದಿನಗಳಲ್ಲಿ ಸುಮಾರು 4.5 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಾಗಿದೆ. ಇದಕ್ಕಾಗಿ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಹರಿಸಲು ಸೂಚಿಸಲಾಗಿದೆ. ಈ ಆದೇಶ ಜಾರಿಯಾದರೆ ರಾಜ್ಯದ ಕುಡಿಯುವ ನೀರು ಹಾಗೂ ಕೃಷಿಗೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ಸುಮಾರು ಶೇ.83ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜಿಲ್ಲೆಯ ಏಳು ತಾಲೂಕುಗಳು ಈಗಾಗಲೇ ಬರದ ಸಂಕಷ್ಟವನ್ನು ಎದುರಿಸುತ್ತಿವೆ. ಮಳೆ ಇದೇ ರೀತಿ ಕೈಕೊಟ್ಟರೆ ಮಂಡ್ಯ, ಮೈಸೂರು ಸೇರಿದಂತೆ ಬೆಂಗಳೂರು ನಗರಕ್ಕೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ.
ನಿನ್ನೆಯಿಂದಲೇ ಮಂಡ್ಯ ಜಿಲ್ಲೆಯ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೂಡ ವಿವಿಧ ತಾಲೂಕುಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಸರ್ಕಾರ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ಹೋರಾಟದ ರೂಪುರೇಷೆ ನಿರ್ಧಾರವಾಗಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಒಂದು ವೇಳೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ, ಜಿಲ್ಲೆಯಲ್ಲಿ ಮತ್ತೊಮ್ಮೆ ಕಾವೇರಿ ಹೋರಾಟ ಉಗ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.





