ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ಕೋಗನೊಳ್ಳಿ ಟೋಲ್ ಪ್ಲಾಜಾದಲ್ಲಿ ಇಂದು ಭೀಕರ ಬೆಂಕಿ ಅವಘಡ ಸಂಭವಿಸಿದೆ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಈ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದ್ದು, ಲಾರಿಯೊಂದರ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ತಕ್ಷಣವೇ ಟೋಲ್‌ನ ಎರಡು ಹಣ ಸಂಗ್ರಹ ಕ್ಯಾಬಿನ್‌ಗಳಿಗೆ ಆವರಿಸಿಕೊಂಡಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಘಟನೆಯ ಸಮಯದಲ್ಲಿ ಟೋಲ್‌ನ ಸಿಬ್ಬಂದಿಗಳು ಕೂಡಲೇ ಸ್ಥಳದಿಂದ ಸುರಕ್ಷಿತವಾಗಿ ತೆರಳಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯ ತೀವ್ರತೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಯಶಸ್ವಿಯಾದರು.
ನಿಪ್ಪಾಣಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಡೀಸೆಲ್ ಟ್ಯಾಂಕ್ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.