ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕರಂಟ್, ನೀರು, ಬಸ್, ಮೆಟ್ರೋ ದರಗಳು ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೆ ಭಾರೀ ಹೊಡೆದ ಬಿದ್ದಿದೆ. ಈಗ ಅದರ ಜೊತೆಗೆ ಪಠ್ಯಪುಸ್ತಕಗಳ ದರವೂ ಹೆಚ್ಚಳಗೊಂಡಿದ್ದು, ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಮತ್ತೊಂದು ಆರ್ಥಿಕ ಹೊರೆ ಆಗಿದೆ. ನೂತನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕಗಳ ದರ ಏರಿಕೆಯಾಗಿರುವುದು, ಶಾಲಾ ದಾಖಲಾತಿ ಸಂದರ್ಭದಲ್ಲಿ ಪೋಷಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (KSBT) 2025–26ನೇ ಶೈಕ್ಷಣಿಕ ವರ್ಷಕ್ಕಾಗಿ ಪಠ್ಯಪುಸ್ತಕಗಳ ದರ ಶೇಕಡಾ 10ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ. ಈ ನಿರ್ಧಾರವನ್ನು ಡಿಸೆಂಬರ್ ತಿಂಗಳಲ್ಲಿ ತೆಗೆದುಕೊಳ್ಳಲಾಗಿದ್ದು, ಈಗಾಗಲೇ ಕೆಲವು ಖಾಸಗಿ ಶಾಲೆಗಳಿಂದ ಮುಂಗಡ ಹಣವನ್ನೂ ಸಂಗ್ರಹಿಸಲಾಗಿದೆ. ಈ ಬೆಳವಣಿಗೆ ಖಾಸಗಿ ಶಾಲೆಗಳ ಪೋಷಕರಿಗೆ ನಿರಾಶೆ ಉಂಟುಮಾಡುತ್ತಿದೆ.
ಸರ್ಕಾರಿ ಶಾಲೆಗೆ ಉಚಿತ, ಖಾಸಗಿ ಶಾಲೆಗೆ ಹೊರೆ!
ಕರ್ನಾಟಕ ಸರ್ಕಾರ ತನ್ನ ಹಿತಚಿಂತನೆಯಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡುತ್ತಿದೆ. ಆದರೆ ಖಾಸಗಿ ಶಾಲೆಗಳ ಮಕ್ಕಳಿಗೆ ಇತಂಹ ಸೌಲಭ್ಯ ಲಭ್ಯವಿಲ್ಲ. ಹೀಗಾಗಿ, ಖಾಸಗಿ ಶಾಲೆಗಳು ಪುಸ್ತಕ ಖರೀದಿಗೆ ಹೆಚ್ಚುವರಿ ಹಣವನ್ನು ಪೋಷಕರಿಂದಲೇ ಸಂಗ್ರಹಿಸುತ್ತಿವೆ. ಇದರಿಂದ ಪಠ್ಯಪುಸ್ತಕಗಳ ದುಬಾರಿ ಬೆಲೆ ಪೋಷಕರ ಜೇಬಿಗೆ ದೊಡ್ಡ ಹೊರೆ ಆಗುತ್ತಿದೆ.
ಪೋಷಕರ ನಿರಾಸೆ ಮತ್ತು ಆಕ್ರೋಶ
ಈ ವರ್ಷವೂ ತರಗತಿ ಪ್ರಾರಂಭಕ್ಕೂ ಮುನ್ನವೇ ಪಠ್ಯಪುಸ್ತಕಗಳ ದರ ಹೆಚ್ಚಳವಾಗಿರುವುದರಿಂದ, ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರು ನಿವಾಸಿಯೊಬ್ಬ ರಾಮೇಶ್ವರಪ್ಪ ತಮ್ಮ ಮಗನಿಗೆ ಐದನೇ ತರಗತಿಯ ಪುಸ್ತಕಗಳನ್ನು ಖರೀದಿಸಲು ಹೋದಾಗ 2,500 ರೂ.ಗಳಷ್ಟು ವೆಚ್ಚವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಏರಿಕೆಯಾಗಿರುವ ಮೊತ್ತ ಸುಮಾರು 300 ರೂ.ಗಳಷ್ಟಿತ್ತು ಎಂದು ಅವರು ತಿಳಿಸಿದ್ದಾರೆ.
ಪಠ್ಯಪುಸ್ತಕಗಳ ಬೆಲೆ ಏರಿಕೆಯನ್ನು ಕೆಲವರು ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣದ ಭಾಗವೆಂದು ಹೇಳುತ್ತಿದ್ದಾರೆ. ಶಿಕ್ಷಣದಂತ ಮಹತ್ವದ ಸೇವೆಯು ಈಗ ಹಣದ ವ್ಯವಹಾರದಲ್ಲಿ ಪರಿವರ್ತನೆಯಾಗುತ್ತಿದೆ ಎಂಬ ಅನಿಸಿಕೆ ಜನರಲ್ಲಿದೆ. ಹೆಚ್ಚಿನ ಬೆಲೆ ಸಲ್ಲಿಸಲು ಸಾಮರ್ಥ್ಯವಿಲ್ಲದ ಜನರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದೆಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.





