ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳ ನಡುವಿನ ಘರ್ಷಣೆ ಹೊಸ ತಿರುವು ಪಡೆದಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಡಿ ರೂಪಾ ಮೌದ್ಗಿಲ್ ನಡುವಿನ ವಿವಾದ ನ್ಯಾಯಾಲಯದ ಮೆಟ್ಟಿಲು ಏರಿರುವ ಬೆನ್ನಲ್ಲೇ, ಡಿಐಜಿ ವರ್ತಿಕಾ ಕಟಿಯಾರ್ ರೂಪಾ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿದ್ದರು.
ವರ್ತಿಕಾ ಕಟಿಯಾರ್ ಅವರು ಡಿ ರೂಪಾ ಮೇಲೆ ದಾಖಲೆ ಕಳವು ಮತ್ತು ಷಡ್ಯಂತ್ರದ ಆರೋಪ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದರು. ಈ ದೂರು ನೀಡಿದ ಕೆಲ ದಿನಗಳಲ್ಲೇ ಅವರನ್ನೇ ಸಿವಿ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
ದೂರಿನಲ್ಲಿ ಏನಿದೆ?
ವರ್ತಿಕಾ ಅವರು ಫೆಬ್ರವರಿ 20ರಂದು ಸಲ್ಲಿಸಿದ ದೂರಿನಲ್ಲಿ, “ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಮತ್ತು ಗೃಹರಕ್ಷಕ ದಳದ ಮಲ್ಲಿಕಾರ್ಜುನ್ ನನ್ನ ಅನುಮತಿಯಿಲ್ಲದೆ ಕೊಠಡಿಗೆ ಪ್ರವೇಶಿಸಿ, ಫೈಲ್‌ಗಳ ಛಾಯಾಚಿತ್ರಗಳನ್ನು ಐಜಿಪಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ರೂಪಾ ಅವರ ಸೂಚನೆಯ ಮೇರೆಗೆ ಇದನ್ನು ಮಾಡಿದ್ದಾಗಿ ಸಿಬ್ಬಂದಿ ತಪ್ಪೊಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಇದರ ಪರಿಣಾಮವಾಗಿ ಸೇಡು ತೀರಿಸಿಕೊಳ್ಳುವ ಪ್ರಯತ್ನ ಎಂದು ಆರೋಪಿಸಲಾಗಿದೆ.
ಹಿಂದೆ ರೂಪಾ ಅವರು ವರ್ತಿಕಾ ಅವರ ವಾರ್ಷಿಕ ವರದಿಯನ್ನು ಹಾಳುಮಾಡುವ ಬೆದರಿಕೆ ಹಾಕಿದ್ದರೂ, ಈಗ ದಾಖಲೆ ಕಳವು ಪ್ರಕರಣದ ನಂತರ ವರ್ತಿಕಾ ಅವರನ್ನು ವರ್ಗಾವಣೆ ಮಾಡಿದ್ದು ವಿವಾದವನ್ನು ಹೆಚ್ಚಿಸಿದೆ.