ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಅಸಭ್ಯ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಡಿಜಿಪಿ ಕೆ. ರಾಮಚಂದ್ರ ರಾವ್ ಅವರದ್ದು ಎನ್ನಲಾದ ಈ ವಿಡಿಯೋಗಳು, ಭಾರೀ ಚರ್ಚೆಯಾಗಿದೆ. ಕಚೇರಿಯಲ್ಲೇ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಡಿಜಿಪಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ತಕ್ಷಣ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಘಟನೆಯ ಹಿನ್ನೆಲೆ: ಕಳೆದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರದ್ದನ್ನಲಾದ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಕಚೇರಿಯ ಆವರಣದಲ್ಲೇ ರಾಸಲೀಲೆಯಲ್ಲಿ ತೊಡಗಿದ್ದ ದೃಶ್ಯಗಳು ವಿಡಿಯೋದಲ್ಲಿದ್ದವು ಎನ್ನಲಾಗಿದೆ. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಪೊಲೀಸ್ ಇಲಾಖೆಯ ಶಿಸ್ತಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ರಾಮಚಂದ್ರ ರಾವ್ ಅವರು ಇದೇ ವರ್ಷದ ಮೇ 31ಕ್ಕೆ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಸುದೀರ್ಘ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಸಂಭ್ರಮದಲ್ಲಿದ್ದ ಅಧಿಕಾರಿಗೆ ಈಗ ಈ ಹಗರಣ ನುಂಗಲಾರದ ತುತ್ತಾಗಿದೆ. ಇಲಾಖಾ ತನಿಖೆ ಬಾಕಿ ಇರುವಾಗಲೇ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ, ಪ್ರಾಥಮಿಕ ವರದಿಗಳ ಆಧಾರದ ಮೇಲೆ ಅವರನ್ನು ಸಸ್ಪೆಂಡ್ ಮಾಡಿದೆ. ಅಧಿಕಾರಿಯ ಈ ವರ್ತನೆಯು ಸೇವಾ ನಿಯಮಗಳ ಉಲ್ಲಂಘನೆಯಾಗಿದ್ದು, ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಈ ಘಟನೆಯು ಪೊಲೀಸ್ ಇಲಾಖೆಯ ನೈತಿಕತೆ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಜಿಪಿ ಶ್ರೇಣಿಯ ಅಧಿಕಾರಿಯೇ ಇಂತಹ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವುದು ಇಲಾಖೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.
ಈ ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರ & ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಾಮಚಂದ್ರ ರಾವ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಪ್ರಕರಣದ ತನಿಖೆ ಆರಂಭವಾದ ಬಳಿಕ, ಹೆಚ್ಚಿನ ಸಾಕ್ಷ್ಯಗಳ ಸಂಗ್ರಹ ಮತ್ತು ದೂರುದಾರರ ಹೇಳಿಕೆ ದಾಖಲಾದ ಮೇಲೆ ಈ ವಿಚಾರ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ ಈ ಪ್ರಕರಣ ಪೊಲೀಸ್ ಇಲಾಖೆಯ ಒಳಗಿನ ನೈತಿಕತೆಯ ಬಗ್ಗೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.





