ಕಲಬುರಗಿ, ನವೆಂಬರ್ 20: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕ ಶಿವಲಿಂಗಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡೆಡ್ ಆಗಿ ಬಂಧಿಸಿದ್ದಾರೆ. ನಿವೃತ್ತ ಶಿಕ್ಷಕಿಯರೊಬ್ಬರ ಪಿಂಚಣಿ ಮತ್ತು ಇತರ ಸರ್ಕಾರಿ ಸೌಲಭ್ಯಗಳ ಫೈಲ್ ಫಾರ್ವರ್ಡ್ ಮಾಡಲು 28 ಸಾವಿರ ರೂಪಾಯಿ ಲಂಚ ಕೇಳಿದ್ದ ಆತ, ಇದರಲ್ಲಿ 25 ಸಾವಿರ ರೂಪಾಯಿ ಫೋನ್‌ಪೇ ಮೂಲಕ ಪಡೆಯುತ್ತಿದ್ದ ವೇಳೆಯೇ ಬಲೆಗೆ ಬಿದ್ದಿದ್ದಾನೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಶಿಕ್ಷಕಿ ರಜಾಕ್ ಬೇಗಮ್ ಅವರು ತಮ್ಮ ನಿವೃತ್ತಿ ವೇತನ (ಪಿಂಚಣಿ), ಗ್ರಾಚ್ಯುಟಿ, ಗ್ರೂಪ್ ಇನ್ಶೂರೆನ್ಸ್ ಸೇರಿದಂತೆ ಎಲ್ಲ ಸೌಲಭ್ಯಗಳ ಲೆಕ್ಕಾಚಾರ ಮತ್ತು ದಾಖಲೆಗಳನ್ನು ಸೇಡಂ BEO ಕಚೇರಿಗೆ ಸಲ್ಲಿಸಬೇಕಿತ್ತು. ಆದರೆ ಈ ಫೈಲ್ ಅನ್ನು ಮುಂದೆ ಸಾಗಿಸಲು ಪ್ರಥಮ ದರ್ಜೆ ಸಹಾಯಕ ಶಿವಲಿಂಗಪ್ಪ ಅವರು ರಜಾಕ್ ಬೇಗಮ್ ಅವರ ಪುತ್ರ ಅಫ್ರೀದ್ ಬೇಗ್ ಬಳಿ ಒಟ್ಟು 28 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅಫ್ರೀದ್ ಬೇಗ್ ಇದನ್ನು ಒಪ್ಪದೇ, ತಕ್ಷಣ ಕಲಬುರಗಿ ಲೋಕಾಯುಕ್ತ ಠಾಣೆಗೆ ದೂರು ದಾಖಲಿಸಿದ್ದರು. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರಂಗನಾಥ್ ಮತ್ತು ಇನ್ಸ್‌ಪೆಕ್ಟರ್ ಅರುಣಕುಮಾರ್ ಮುರಗುಂಡಿ ನೇತೃತ್ವದ ತಂಡ ತ್ವರಿತ ಕಾರ್ಯಾಚರಣೆ ಆರಂಭಿಸಿತು.
ಲೋಕಾಯುಕ್ತ ತಂಡವು ಅಫ್ರೀದ್ ಬೇಗ್ ಅವರಿಗೆ 25 ಸಾವಿರ ರೂಪಾಯಿ ಫೋನ್‌ಪೇ ಮೂಲಕ ಕಳುಹಿಸಲು ಸೂಚಿಸಿತು. ಶಿವಲಿಂಗಪ್ಪ ಅವರ ಮೊಬೈಲ್‌ಗೆ ಹಣ ಬಂದ ಕೂಡಲೇ ಅವರು ಹಣ ಬಂದಿದೆ, ಫೈಲ್ ಮುಂದೆ ಹೋಗುತ್ತದೆ ಎಂದು ಮೆಸೇಜ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಲೋಕಾಯುಕ್ತ ತಂಡವು ಸೇಡಂ BEO ಕಚೇರಿಯನ್ನ ದಾಳಿ ಮಾಡಿ ಶಿವಲಿಂಗಪ್ಪ ಅವರನ್ನು ವಶಕ್ಕೆ ಪಡೆದುಕೊಂಡಿತು. ಆತನ ಮೊಬೈಲ್‌ನಲ್ಲಿ ಫೋನ್‌ಪೇ ಟ್ರಾನ್ಸಾಕ್ಷನ್ ಡೀಟೇಲ್ಸ್, ಚಾಟ್ ಸ್ಕ್ರೀನ್‌ಶಾಟ್ ಸೇರಿದಂತೆ ಎಲ್ಲ ಪುರಾವೆಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದಲ್ಲಿ ಶಿವಲಿಂಗಪ್ಪ ಅವರ ವಿರುದ್ಧ ಲಂಚ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನ್ನು ಬಂಧಿಸಿ ಕಲಬುರಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಮಾತ್ರ ಕಲಬುರಗಿ ಲೋಕಾಯುಕ್ತ ತಂಡವು 8ಕ್ಕೂ ಹೆಚ್ಚು ಲಂಚ ಪ್ರಕರಣಗಳನ್ನು ಬಯಲು ಮಾಡಿದೆ. ಶಿಕ್ಷಣ ಇಲಾಖೆಯಲ್ಲೇ ಇದು ಮೂರನೇ ಪ್ರಕರಣವಾಗಿದೆ. ಈ ಹಿಂದೆ ಯಾದಗಿರಿ ಮತ್ತು ರಾಯಚೂರು ತಾಲೂಕುಗಳ BEO ಕಚೇರಿಗಳಲ್ಲಿಯೂ ಇಂತಹ ಲಂಚ ಪ್ರಕರಣಗಳು ಬೆಳಕಿಗೆ ಬಂದಿದ್ದವು.





