ಬೆಂಗಳೂರು: ಹಾಡಹಗಲೇ ಕಳ್ಳತನಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯುವತಿಯನ್ನೇ ನಡುರಸ್ತೆಯಲ್ಲೇ ಎಳೆದಾಡಿ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳ್ಳತನಕ್ಕೆ ಬಂದಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಅಂಗಡಿಯಲ್ಲಿದ್ದ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಾನೆ. ಅಲ್ಲದೆ, ಯುವತಿಯ ಎರಡೂ ಕೈಗಳಿಗೆ ಫೆವಿಕ್ವಿಕ್ ಅಂಟಿಸಿ, ಆಕೆಯ ಬಳಿಯಿದ್ದ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ದೋಚಿದ್ದಾನೆ. ಕೊನೆಗೆ ಸ್ಥಳೀಯರು ಯುವತಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್ 31ರಂದು ಬೆಳಗ್ಗೆ ಸುಮಾರು 11.45ರ ವೇಳೆಗೆ ಈ ಘಟನೆ ನಡೆದಿದೆ. ಪ್ರಭುರಾಜ್ ಅಲಿಯಾಸ್ ರಾಜ್ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಶೂ, ಬ್ಯಾಗ್ ರಿಪೇರಿ ಅಂಗಡಿಗೆ ನುಗ್ಗಿದ ಆರೋಪಿ
ಇಂದಿರಾನಗರದ ಶೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಜಯಶ್ರೀ ಎಂಬ ಯುವತಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 31ರಂದು ಬೆಳಗ್ಗೆ ಸುಮಾರು 11.45ರ ವೇಳೆಗೆ ಏಕಾಏಕಿ ಅಂಗಡಿಗೆ ನುಗ್ಗಿದ ಆರೋಪಿ ಪ್ರಭುರಾಜ್, ಯಾರೋ ತನ್ನನ್ನು ಕೊಲೆ ಮಾಡಲು ಬರುತ್ತಿದ್ದಾರೆ ಎಂಬಂತೆ ನಾಟಕವಾಡಿದ್ದಾನೆ. ಬಳಿಕ ಇದ್ದಕ್ಕಿದ್ದಂತೆ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದಾನೆ.
ಯುವತಿಯ ಎರಡೂ ಕೈಗಳಿಗೆ ಫೆವಿಕ್ವಿಕ್ ಹಾಕಿ ಟೇಬಲ್‌ಗೆ ಅಂಟಿಸಿದ್ದಾನೆ. ನಂತರ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 34 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ. ಕಳವು ಮಾಡಲಾದ ಚಿನ್ನದ ಸರದ ಮೌಲ್ಯ ಸುಮಾರು 4.5 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಕೊಲೆ ಬೆದರಿಕೆ
ಚಿನ್ನದ ಸರ ಕಸಿದುಕೊಂಡ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಜಯಶ್ರೀ ಜೋರಾಗಿ ಕಿರುಚಿಕೊಂಡಿದ್ದಾರೆ. ಆಕೆಯ ಕಿರುಚಾಟ ಕೇಳಿದ ಅಕ್ಕಪಕ್ಕದ ಅಂಗಡಿಗಳಲ್ಲಿದ್ದವರು ಹಾಗೂ ಸ್ಥಳೀಯರು ತಕ್ಷಣ ಅಂಗಡಿಯ ಬಳಿ ಜಮಾಯಿಸಿದ್ದಾರೆ.
ಆದರೆ, ಜನರು ತನ್ನನ್ನು ಹಿಡಿಯಲು ಬರುತ್ತಿರುವುದನ್ನು ಗಮನಿಸಿದ ಆರೋಪಿ ಮತ್ತಷ್ಟು ಕ್ರೂರವಾಗಿ ವರ್ತಿಸಿದ್ದಾನೆ. ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದಾನೆ. ಯಾರಾದರೂ ತನ್ನನ್ನು ಹಿಡಿಯಲು ಮುಂದಾದರೆ ಯುವತಿಯನ್ನು ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾನೆ.
ಪ್ರಾಣದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಸ್ಥಳೀಯರು
ಆರೋಪಿಯ ಬೆದರಿಕೆಗೆ ಹೆದರದೆ ಸ್ಥಳೀಯರು ಧೈರ್ಯದಿಂದ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಕೊನೆಗೂ ಹರಸಾಹಸ ಪಟ್ಟು ಯುವತಿಯನ್ನು ಆರೋಪಿಯ ಹಿಡಿತದಿಂದ ಬಿಡಿಸಿದ್ದಾರೆ. ಬಳಿಕ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ವೇಳೆ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಗಳೂರಿನ ಜನರಲ್ಲಿ ಆತಂಕ ಮೂಡಿಸಿವೆ.
ಇಂದಿರಾನಗರ ಪೊಲೀಸರಿಂದ ಆರೋಪಿ ಬಂಧನ
ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರಭುರಾಜ್ ಅಲಿಯಾಸ್ ರಾಜ್‌ನನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳ್ಳತನದ ಉದ್ದೇಶದಿಂದ ಅಂಗಡಿಗೆ ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.





