ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮತ್ತು ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಪುತ್ರ ಶಶಾಂಕ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅವರಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ ಬಿ.ಜಿ. ಎಂದು ಗುರುತಿಸಲಾಗಿದೆ. ಈ ಘಟನೆಯು ನಿನ್ನೆ ರಾತ್ರಿ ಸುಮಾರು 10.30ರ ಸುಮಾರಿಗೆ ಗುಡೆಮಾರೇನಳ್ಳಿ ಟೋಲ್ ಬಳಿ ಸಂಭವಿಸಿದೆ.
ರಾಜೇಶ್ ಅವರು ದಾಬಸ್ ಪೇಟೆಯಲ್ಲಿರುವ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿಯ ಕೆಲಸ ಮುಗಿಸಿ ತಮ್ಮ ಸ್ಕೂಟಿಯಲ್ಲಿ ವಾಪಸ್ ಮನೆಗೆ ಮರಳುತ್ತಿದ್ದರು. ಇದೇ ವೇಳೆ, ಶಶಾಂಕ್ ಅವರಿದ್ದ ಫಾರ್ಚುನರ್ ಕಾರು ವೇಗವಾಗಿ ಬಂದು ರಾಜೇಶ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಾಜೇಶ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಾರು ಡಿಕ್ಕಿ ಹೊಡೆದ ತಕ್ಷಣ, ಚಾಲಕ ಕಾರನ್ನು ನಿಲ್ಲಿಸದೆ, ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಕಾರನ್ನು ಹಿಂಬಾಲಿಸಿದ್ದಾರೆ. ಸ್ಥಳೀಯರು ಅಪಘಾತ ಸ್ಥಳದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ಸನ್ ಫ್ಲವರ್ ಆಯಿಲ್ ಫ್ಯಾಕ್ಟರಿ ಬಳಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದವರ ಕುರಿತು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಫಾರ್ಚುನರ್ ಕಾರಿನಲ್ಲಿ ಕಾಂಗ್ರೆಸ್ ನಾಯಕ ಎಚ್.ಎಂ. ರೇವಣ್ಣ ಅವರ ಪುತ್ರ ಶಶಾಂಕ್ ಅವರು, ಅವರ ಪತ್ನಿ, ಮಗು ಮತ್ತು ಒಬ್ಬ ವಯಸ್ಸಾದ ವ್ಯಕ್ತಿ ಪ್ರಯಾಣಿಸುತ್ತಿದ್ದರು. ಕಾರ್ ಚಾಲಕ ಎರಡು ಬೈಕ್‌ಗಳನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ಕಳೆದುಕೊಂಡು ಸ್ಕೂಟಿಗೆ ಗುದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾರನ್ನು ತಡೆದು ನಿಲ್ಲಿಸುತ್ತಿದ್ದಂತೆಯೇ, ಅಲ್ಲಿದ್ದ ಸ್ಥಳೀಯರ ಎದುರು ಶಶಾಂಕ್ ನಾನು ಎಚ್.ಎಂ. ರೇವಣ್ಣ ಅವರ ಮಗ ಎಂದು ದೌಲತ್ತು ತೋರಿಸಿ ಗದರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪ ಮಾಡಿದ್ದಾರೆ.
ಮೃತ ರಾಜೇಶ್ ಅವರು ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ಬಡ ಕುಟುಂಬದ ಯುವಕ. ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬರುತ್ತಿದ್ದ ಅವರ ಸಂಪಾದನೆಯೇ ಅವರ ಕುಟುಂಬಕ್ಕೆ ಪ್ರಮುಖ ಆಧಾರವಾಗಿತ್ತು. ರಾಜೇಶ್ ಅವರ ಕುಟುಂಬದಲ್ಲಿ ತಂದೆ, ತಾಯಿ ಮತ್ತು ಇಬ್ಬರು ಅಕ್ಕ ಇದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಏಕೈಕ ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಈ ದುರ್ಘಟನೆಯು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಜೇಶ್ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ಯುವಕನ ಕುಟುಂಬ ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.





