ಹಾಸನ: ಹಾಸನ ನಗರದ ಪ್ರಸಿದ್ಧ ಹಾಸನಾಂಬ ದೇವಾಲಯಕ್ಕೆ ದರ್ಶನಕ್ಕಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದಿಂದ ಹಿಡಿದು ಮುಖ್ಯ ರಸ್ತೆವರೆಗೂ ಭಕ್ತರ ಸರತಿ ಸಾಲು ಉಂಟಾಗಿದೆ. ದೀಪಾವಳಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವುದರಿಂದ ಹೆಚ್ಚಿನ ಭದ್ರತೆ ಅತ್ಯಗತ್ಯವಾಗಿದೆ.
ಈ ಪರಿಸ್ಥಿತಿಯ ನಡುವೆ, ಹಾಸನ ಜಿಲ್ಲಾ ಪೊಲೀಸ್ ಅಧಿಕಾರಿ ಮೊಹಮ್ಮದ್ ಸುಜೀತಾ ಜಿಲ್ಲಾಡಳಿತ ಅಧಿಕಾರಿ ಲತಾ ಕುಮಾರಿ ಅವರಿಗೆ ಪತ್ರ ಬರೆದು, ಭಕ್ತರ ನಿಯಂತ್ರಣಕ್ಕೆ ತಕ್ಷಣ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ, ದೇವಾಲಯದ ಸಮೀಪ ಭಕ್ತರನ್ನು ನಿಯಂತ್ರಿಸಲು ಸಾಕಷ್ಟು ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ನೂಕುನುಗ್ಗಲು ಉಂಟಾಗಿ ಅಹಿತಕರ ಘಟನೆ ಸಂಭವಿಸಬಹುದು. ಭಕ್ತರನ್ನು ನಿಯಂತ್ರಿಸಲು ಕ್ರಮ ವಹಿಸದೇ ಇದ್ದಲ್ಲಿ, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಮನವಿಯ ಹಿನ್ನೆಲೆಯಲ್ಲಿ, ದೇವಾಲಯದ ನಿರ್ವಹಣೆ ಮತ್ತು ಭಕ್ತರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಎದ್ದುಕಾಣುತ್ತವೆ. ಪೊಲೀಸ್ ಇಲಾಖೆಯು ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದರೂ, ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಭಕ್ತರ ಸಂಖ್ಯೆ ನಿರ್ವಹಿಸಲು ಸವಾಲಾಗಿದೆ.
ದರ್ಶನ ಸಮಯ:
ದೇವಾಲಯದ ನಿರ್ದೇಶನದ ಪ್ರಕಾರ, ಇಂದು ಮಧ್ಯಾಹ್ನ 2:00 ರಿಂದ 3:30 ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿಯನ್ನು ಮುಚ್ಚಲಾಗುವುದು. ಅನಂತರ, ಮಧ್ಯಾಹ್ನ 3:30 ರಿಂದ ನಾಳೆ (ಅಕ್ಟೋಬರ್ 20) ಮುಂಜಾನೆ 3:00 ರವರೆಗೆ ನಿರಂತರ ದರ್ಶನ ಸೌಲಭ್ಯ ಒದಗಿಸಲಾಗುವುದು. ಮುಂಜಾನೆ 3:00 ರಿಂದ 5:00 ರವರೆಗೆ ಮತ್ತೆ ನೈವೇದ್ಯಕ್ಕಾಗಿ ಗರ್ಭಗುಡಿಯನ್ನು ಮುಚ್ಚಲಾಗುವುದು. ಬೆಳಿಗ್ಗೆ 5:00 ಗಂಟೆಯಿಂದ ಹಾಸನಾಂಬ ದೇವಿಯ ದರ್ಶನ ಪುನಃ ಆರಂಭವಾಗಲಿದೆ.
ಈ ಸಮಯಾವಕಾಶವನ್ನು ಭಕ್ತರು ಗಮನದಲ್ಲಿಟ್ಟುಕೊಂಡು, ತಮ್ಮ ದರ್ಶನ ಯೋಜನೆ ಮಾಡಿಕೊಳ್ಳುವುದು ಉಚಿತ. ಪೊಲೀಸ್ ಮತ್ತು ಆಡಳಿತದ ಸಹಕಾರದಿಂದ, ಭಕ್ತರು ಸುರಕ್ಷಿತ ಮತ್ತು ಸುಗಮವಾದ ದರ್ಶನ ಪಡೆಯಲು ಸಾಧ್ಯವಾಗುವುದು ಅನಿವಾರ್ಯ.





