ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ, ರೈತರ ಪ್ರತಿಭಟನೆಗೆ ಆಗಮಿಸಿದ್ದ ಒಬ್ಬ ರೈತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ರೈತನನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರುಬರಹುಂಡಿಯ ನಿವಾಸಿಯಾದ ಈಶ್ವರ್ (50) ಎಂದು ಗುರುತಿಸಲಾಗಿದೆ. ಈಶ್ವರ್, ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿ, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಇಳಿದು, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಆದರೆ, ರೈಲು ನಿಲ್ದಾಣದ ರಸ್ತೆಯಲ್ಲಿಯೇ ಈಶ್ವರ್ ದಿಢೀರನೆ ಕುಸಿದು ಬಿದ್ದಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಈಶ್ವರ್‌ಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸಿಟೇಶನ್) ನೀಡಿ, ಜೀವ ಉಳಿಸಲು ಶತಪ್ರಯತ್ನ ನಡೆಸಿದರು. ನಂತರ, ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಮಾರ್ಗಮಧ್ಯೆಯೇ ಈಶ್ವರ್ ಸಾವನ್ನಪ್ಪಿದರು. ಪ್ರಾಥಮಿಕ ತನಿಖೆಯಲ್ಲಿ, ಈಶ್ವರ್‌ಗೆ ಹೃದಯಾಘಾತವೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕಾಟನ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ರೈತರ ಬೇಡಿಕೆಗಳನ್ನು ಒತ್ತಾಯಿಸಲು ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಾವಿರಾರು ರೈತರು ಭಾಗವಹಿಸಿದ್ದಾರೆ.





