ತುಮಕೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬೆಳವಣಿಗೆಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೋಣವಿನಕೆರೆ ಭೇಟಿಯ ಸಮಯ ಹಾಗೂ ಸಿದ್ಧತೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಪ್ರಸಿದ್ಧ ನೋಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠ (ಅಜ್ಜಯ್ಯನ ಪೀಠ) ಕ್ಕೆ ಇಂದು ಮಧ್ಯಾಹ್ನ 3:00 ಗಂಟೆಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡುವ ಸಾಧ್ಯತೆ ಇದೆ.
ರಾಜ್ಯದ ಮುಂದಿನ ಮುಖ್ಯಮಂತ್ರಿ ಪಟ್ಟಕ್ಕೆ ಡಿ.ಕೆ. ಶಿವಕುಮಾರ್ ಹೆಸರು ಬಲವಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ, ಅವರು ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ರಾಜಕೀಯ ಜೀವನದ ಹಲವು ಮಹತ್ವದ ನಿರ್ಧಾರಗಳ ಮುನ್ನ ನೋಣವಿನಕೆರೆ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವ ಪರಿಪಾಠವನ್ನು ಡಿಕೆಶಿ ಹಲವು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದಾರೆ.
ಮಠದ ಪೀಠಾಧಿಪತಿಗಳಾದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳೊಂದಿಗೆ ಡಿಕೆ ಶಿವಕುಮಾರ್ ಅವರಿಗೆ ವಿಶೇಷ ಆತ್ಮೀಯತೆ ಇದೆ. ಹಲವು ರಾಜಕೀಯ ಸಂಕಷ್ಟಗಳ ಸಂದರ್ಭದಲ್ಲಿಯೂ ಅಜ್ಜಯ್ಯನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾರ್ಗದರ್ಶನ ಪಡೆದಿದ್ದ ಡಿಕೆಶಿ, ಇದೀಗ ಮತ್ತೊಮ್ಮೆ ಮಠದತ್ತ ಮುಖ ಮಾಡಿದ್ದಾರೆ.
ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಡಿಕೆ ಶಿವಕುಮಾರ್ ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಇಡೀ ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದು, ಮಠಕ್ಕೆ ಬರುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಇನ್ನೊಂದೆಡೆ, ಡಿಕೆಶಿ ಆಗಮನದ ಹಿನ್ನೆಲೆ ಮಠದ ಸಿಬ್ಬಂದಿ ಹಾಗೂ ಭಕ್ತರು ದೇವಸ್ಥಾನ ಮತ್ತು ಗದ್ದುಗೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಸಂಪೂರ್ಣ ಆವರಣವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಲಾಗಿದ್ದು, ವಿಶೇಷ ಪೂಜೆಗೆ ಸಿದ್ಧತೆಗಳು ಕೂಡ ಜೋರಾಗಿವೆ.
ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಮುನ್ನ ಡಿಕೆ ಶಿವಕುಮಾರ್ ಅಜ್ಜಯ್ಯನ ಆಶೀರ್ವಾದ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಮಾಣವಚನ ಸ್ವೀಕಾರಕ್ಕೆ ಸೂಕ್ತ ದಿನ ಮತ್ತು ಸಮಯದ ಕುರಿತು ಅಜ್ಜಯ್ಯನ ಬಳಿ ಮುಹೂರ್ತ ಕೇಳುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಜ್ಜಯ್ಯ ಸೂಚಿಸುವ ದಿನ ಮತ್ತು ಸಮಯದಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ. ಸಂಜೆ ವೇಳೆಗೆ ಡಿಕೆಶಿ ಮಠಕ್ಕೆ ಆಗಮಿಸಲಿರುವ ಹಿನ್ನೆಲೆ ಭಕ್ತರ ಪ್ರವೇಶಕ್ಕೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.




