ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್ ಸಂಪುಟ ವಿಸ್ತರಣೆ ಫಿಕ್ಸ್ ಎನ್ನಲಾಗಿದೆ.. ಸಂಪುಟದಲ್ಲಿ ಪ್ರಸ್ತುತ 20 ಕ್ಕೂ ಹೆಚ್ಚು ಸ್ಥಾನಗಳು ಖಾಲಿ ಇವೆ. ಇದೀಗ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯದವರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಎರಡನೇ ಪಟ್ಟಿಯ ಹಿಂದಿನ ಲೆಕ್ಕಚಾರವೇನು?
ಕಳೆದ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ಮುಖಂಡ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಸುಮಾರು 45 ಮಂದಿಯ ಶಾರ್ಟ್ ಲಿಸ್ಟ್ ಅನ್ನು ಹೈಕಮಾಂಡ್ ಮುಂದಿಡಲಾಗಿದೆ. ರಾಹುಲ್ ಗಾಂಧಿ ಅವರು 50 ವರ್ಷದೊಳಗಿನ ಯುವಕರಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದಾರೆ. ಆದರೆ, ಹಿರಿಯ ಹಾಗೂ ಅನುಭವಿ ಮುಖಂಡರಿಗೂ ಸ್ಥಾನ ನೀಡಬೇಕೆಂಬ ಒತ್ತಡವಿದೆ.
ಜೂನ್ 18 ಬಳಿಕ ದೆಹಲಿಗೆ ದೌಡು
ಎರಡನೇ ಪಟ್ಟಿ ಅಂತಿಮಗೊಳಿಸಲು ಜೂನ್ 18 ರ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಹೆಸರುಗಳನ್ನು ನಿರ್ಧರಿಸಲಾಗುವುದು. ಸಂಪುಟದ ಎಲ್ಲಾ 20 ಸ್ಥಾನಗಳನ್ನು ತುಂಬದೇ, ಕೇವಲ 15 ರಿಂದ 17 ಸ್ಥಾನಗಳನ್ನು ಭರ್ತಿ ಮಾಡುವ ತಂತ್ರವನ್ನು ಡಿ.ಕೆ. ಶಿವಕುಮಾರ್ ರೂಪಿಸಿದ್ದಾರೆ. ಉಳಿದ 3-5 ಸ್ಥಾನಗಳನ್ನು ಖಾಲಿಯಾಗಿಟ್ಟುಕೊಂಡು ನಂತರದ ದಿನಗಳಲ್ಲಿ ಅಸಮಾಧಾನಿತರನ್ನು ಸಮಾಧಾನಪಡಿಸಿಕೊಳ್ಳಲು ಅವಕಾಶವಾಗಿಟ್ಟುಕೊಳ್ಳುವುದು ಅವರ ಯೋಜನೆಯಾಗಿದೆ.
ಯಾರಿಗೆಲ್ಲಾ ಚಾನ್ಸ್ ಸಿಗಬಹುದು?
ಕೆಳಗಿನ ಶಾಸಕರು ಎರಡನೇ ಸಂಪುಟ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಅತ್ಯಧಿಕವಾಗಿದೆ.
ಚಿಕ್ಕಬಳ್ಳಾಪುರ
-
ಸುಬ್ಬಾರೆಡ್ಡಿ (ಬಾಗೇಪಲ್ಲಿ): ಮೂರು ಬಾರಿಯ ಶಾಸಕ, ಡಿ.ಕೆ. ಶಿವಕುಮಾರ್ ಅವರ ಆಪ್ತ. ಆದಾಯ ತಪ್ಪು ಮಾಹಿತಿ ಪ್ರಕರಣದಲ್ಲಿ ಹೈಕೋರ್ಟ್ ಅವರ ಶಾಸಕ ಸ್ಥಾನ ರದ್ದುಪಡಿಸಿದ್ದು, ಸುಪ್ರೀಂನಲ್ಲಿ ತಡೆ ಇದೆ. ಹೀಗಾಗಿ ಅವರ ಸಚಿವ ಸ್ಥಾನದ ದಾರಿ ಕಠಿಣವಾಗಿದೆ.
-
ಪ್ರದೀಪ್ ಈಶ್ವರ್: ಮೊದಲ ಬಾರಿಯ ಶಾಸಕ, ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಬೆಂಬಲಿಗ. ಬಿಜೆಪಿ ವಿರುದ್ಧದ ವಾಗ್ದಾಳಿಯಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ.
ಬೆಂಗಳೂರು ಗ್ರಾಮಾಂತರ
-
ಶರತ್ ಬಚ್ಚೇಗೌಡ: ಡಿಕೆಶಿಯವರ ಆಪ್ತ, ಎರಡು ಬಾರಿಯ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ. ಹಗರಣರಹಿತ ರಾಜಕಾರಣಿಯಾಗಿದ್ದಾರೆ.
ಬೆಂಗಳೂರು ನಗರ (ನಾಲ್ಕು ಪ್ರಮುಖ ಹೆಸರುಗಳು)
-
ಜಮೀರ್ ಅಹ್ಮದ್ (ಚಾಮರಾಜಪೇಟೆ): ಐದು ಬಾರಿಯ ಶಾಸಕ, ಮುಸ್ಲಿಂ ಸಮುದಾಯದ ಪ್ರಬಲ ನಾಯಕ. ಆದರೆ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿ, ಆಡಿಯೋ ವೈರಲ್ ಆಗಿರುವುದರಿಂದ ಹೈಕಮಾಂಡ್ ಹಿಂದೇಟು ಹಾಕಿದೆ.
-
ಎಂ.ಎನ್. ಹ್ಯಾರಿಸ್ (ಶಾಂತಿನಗರ): ನಾಲ್ಕು ಬಾರಿಯ ಶಾಸಕ, ಮುಸ್ಲಿಂ ಸಮುದಾಯದ ನಾಯಕ, ಡಿಕೆಶಿ ಅವರ ಆಪ್ತ. ಯುವಕರ ಕೋಟಾದಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ.
-
ಎಂ. ಕೃಷ್ಣಪ್ಪ (ವಿಜಯನಗರ): ಐದು ಬಾರಿಯ ಶಾಸಕ, ಸಿದ್ದರಾಮಯ್ಯ ಅವರ ಆಪ್ತ, ಒಕ್ಕಲಿಗ ಸಮುದಾಯ. ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.
-
ದಿನೇಶ್ ಗುಂಡೂರಾವ್ (ಗಾಂಧಿನಗರ): ಆರು ಬಾರಿಯ ಶಾಸಕ, ಹೈಕಮಾಂಡ್ ನಿಷ್ಠಾವಂತ, ರಾಹುಲ್ ಗಾಂಧಿ ಅವರ ನೇರ ಸಂಪರ್ಕ ಹೊಂದಿದ ಬ್ರಾಹ್ಮಣ ಸಮುದಾಯದ ನಾಯಕ.
ಮಂಡ್ಯ ಜಿಲ್ಲೆ
-
ಚಲುವರಾಯಸ್ವಾಮಿ (ನಾಗಮಂಗಲ): ನಾಲ್ಕು ಬಾರಿಯ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ
ಮಂಡ್ಯ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಇರೋ ನಾಯಕ. ಹೆಚ್‌ಡಿಕೆ ವಿರುದ್ಧ ರಾಜಕೀಯ ಮಾಡಲು ಡಿಕೆಶಿಗೆ ಅನಿವಾರ್ಯ. -
ಪಿ.ಎಂ. ನರೇಂದ್ರಸ್ವಾಮಿ (ಮಳವಳ್ಳಿ): ಎಸ್.ಸಿ. ಬಲಗೈ ನಾಯಕ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಆಪ್ತ. ಹಳೇ ಮೈಸೂರು ಪ್ರದೇಶದಲ್ಲಿ ಪ್ರಭಾವಿ ನಾಯಕ.
ಮೈಸೂರು
-
ತನ್ವೀರ್ ಸೇಠ್ (ನರಸಿಂಹರಾಜ): ಆರು ಬಾರಿಯ ಶಾಸಕ, ಮುಸ್ಲಿಂ ಸಮುದಾಯ, ಈ ಹಿಂದೆ ಸಚಿವರಾಗಿದ್ದ ಅನುಭವವಿದೆ.
-
ಹೆಚ್.ಸಿ. ಮಹದೇವಪ್ಪ (ತಿ.ನರಸೀಪುರ): ಏಳು ಬಾರಿಯ ಶಾಸಕ, ದಲಿತ ಬಲಗೈ ಸಮುದಾಯದ ಪರಮೋಚ್ಚ ನಾಯಕ, ಸಿದ್ದರಾಮಯ್ಯ ಅವರ ನಿಷ್ಠಾವಂತರು.
ಹಾಸನ ಮತ್ತು ಶಿವಮೊಗ್ಗ
-
ಶಿವಲಿಂಗೇಗೌಡ (ಅರಸೀಕೆರೆ): ನಾಲ್ಕು ಬಾರಿಯ ಶಾಸಕ, ಹಿಂದೆ ಜೆಡಿಎಸ್‌ನಲ್ಲಿದ್ದವರು, ಈಗ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಶಾಸಕರು. ಹೆಚ್.ಡಿ. ದೇವೇಗೌಡರ ವಿರುದ್ಧ ಡಿಕೆಶಿಗೆ ಇವರು ಅಸ್ತ್ರ.
-
ಮಧುಬಂಗಾರಪ್ಪ (ಸೊರಬ): ಎರಡು ಬಾರಿಯ ಶಾಸಕ, ಈಡಿಗ ಸಮುದಾಯದ ಪ್ರಮುಖ ನಾಯಕ.
-
ಸಂಗಮೇಶ್ (ಭದ್ರಾವತಿ): ನಾಲ್ಕು ಬಾರಿಯ ಶಾಸಕ, ಡಿಕೆಶಿ ಅವರ ಅತ್ಯಾಪ್ತರಲ್ಲಿ ಒಬ್ಬರು.
ದಾವಣಗೆರೆ
-
ಎಸ್.ಎಸ್. ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ): ವಿವಾದರಹಿತವಾಗಿ ಸಚಿವರಾಗಿ ಯಶಸ್ಸು ಕಂಡವರು.
-
ಶಾಂತನಗೌಡ (ಹೊನ್ನಾಳಿ): ಮೂರು ಬಾರಿಯ ಶಾಸಕ, ಬಿಜೆಪಿ ಭದ್ರಕೋಟೆಯಲ್ಲೂ ಗೆದ್ದು ಮಿಂಚಿದವರು.
ಒಟ್ಟಾರೆಯಾಗಿ, ಎರಡನೇ ಸಂಪುಟ ವಿಸ್ತರಣೆಯಲ್ಲಿ ಜಿಲ್ಲಾ ಸಮತೋಲನ, ಜಾತಿ ಸಮೀಕರಣ ಮತ್ತು ಯುವಕರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಆದರೆ ಜಮೀರ್ ಅಹ್ಮದ್ ಅವರಂತಹ ನಾಯಕರ ಮೇಲಿನ ಆಡಿಯೋ ಪ್ರಕರಣ ಹೈಕಮಾಂಡ್‌ನ ನಿರ್ಧಾರವನ್ನು ಬದಲಿಸಬಹುದು. ಸುಬ್ಬಾರೆಡ್ಡಿ ಅವರ ಕಾನೂನು ತೊಡಕು ಕೂಡ ದೊಡ್ಡ ಅಡ್ಡಿಯಾಗಿದೆ. ಜೂನ್ ಅಂತ್ಯದ ವೇಳೆಗೆ ಎರಡನೇ ಪಟ್ಟಿ ಬಹಿರಂಗವಾಗುವ ಸಾಧ್ಯತೆಯಿದೆ.




