ರಾಯಚೂರು: ರಾಯಚೂರಿನ ಮಂತ್ರಾಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಧರ್ಮಪತ್ನಿಯೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಡಿ.ಕೆ. ಶಿವಕುಮಾರ್ ಅವರು ಆಗಮಿಸಿದ್ದರು. ಅರ್ಚಕ ಶಾಮಾಚಾರ್ಯರು ಮಾತನಾಡಿದ್ದು, ರಾಘವೇಂದ್ರ ಸ್ವಾಮಿಗಳು 12 ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಅವರ ಗುರುಗಳಾದ ಪಂಚಮುಖಿ ಪ್ರಾಣದೇವರು ಮತ್ತು ಮನೆದೇವರಾದ ಲಕ್ಷ್ಮೀ ವೆಂಕಟ ರಮಣ ಸ್ವಾಮಿಗಳು ರಾಯರಿಗೆ ದರ್ಶನ ನೀಡಿದ್ದಾರೆ. ರಾಯರು ಬೃಂದಾವನ ಪ್ರವೇಶ ಮಾಡಿ 353 ವರ್ಷಗಳು ಕಳೆದಿವೆ. ಈ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರ ಬೇಡಿಕೆಗಳು ಈಡೇರಿವೆ ಎಂಬ ನಂಬಿಕೆಯಿದೆ.
ಡಿ.ಕೆ. ಶಿವಕುಮಾರ್ ಅವರು ಈ ದೇವಾಲಯಕ್ಕೆ 15 ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಆ ಭೇಟಿಯ ಬಳಿಕ ಅವರು ಉನ್ನತ ಸ್ಥಾನಕ್ಕೇರಿ ಉಪಮುಖ್ಯಮಂತ್ರಿಯಾಗಿದ್ದಾರೆ. ಈಗ ಮತ್ತೆ ರಾಯರ ದರ್ಶನಕ್ಕೆ ಬಂದಿರುವ ಅವರು, ಮುಖ್ಯಮಂತ್ರಿಯಾಗುವ ಸಂಕಲ್ಪವನ್ನು ಮಾಡಿದ್ದಾರೆ ಎಂದು ಶಾಮಾಚಾರ್ಯರು ತಿಳಿಸಿದ್ದಾರೆ. “ಪಂಚಮುಖಿ ಪ್ರಾಣದೇವರು ಮತ್ತು ರಾಯರ ಅನುಗ್ರಹದಿಂದ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಮುಖ್ಯಮಂತ್ರಿಯಾಗುತ್ತಾರೆ” ಎಂದು ಅವರು ಭವಿಷ್ಯ ನುಡಿದಿದ್ದಾರೆ.
ರಾಯರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಹಲವು ಬಾರಿ ಮಂತ್ರಾಲಯಕ್ಕೆ ಬರಬೇಕೆಂದು ಯೋಚಿಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಇಂದು ಕುಟುಂಬ ಸಮೇತ ರಾಯರ ದರ್ಶನ ಪಡೆಯುವ ಭಾಗ್ಯ ದೊರೆತಿದೆ. ಇದು ನನ್ನ ಸೌಭಾಗ್ಯ. ನಾಡಿನ ಜನತೆಯ ಒಳಿತಿಗಾಗಿ, ಎಲ್ಲರ ಸುಖ-ಶಾಂತಿಗಾಗಿ ರಾಯರಲ್ಲಿ ಪ್ರಾರ್ಥಿಸಿದ್ದೇನೆ” ಎಂದು ಹೇಳಿದರು. ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಅವರು, ಫಲ-ಮಂತ್ರಾಕ್ಷತೆಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು ಡಿ.ಕೆ. ಶಿವಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.





