ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟದ ಮೊದಲ ಪಟ್ಟಿಯು ಅಂತಿಮವಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದ ತೀವ್ರ ಚರ್ಚೆಯ ಬಳಿಕ ನಾಳೆ ಸಂಜೆ 4:05 ಗಂಟೆಗೆ ಸಿಎಂ ಡಿಕೆಶಿ ಸಹಿತ 10 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದರೆ, ಒಟ್ಟು 11 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಗ್ಯಾರಂಟಿ ನ್ಯೂಸ್‌ಗೆ AICC ಮೂಲಗಳು ಖಚಿತಪಡಿಸಿವೆ.
ನಾಳೆ ಸಂಜೆ 4:05ಕ್ಕೆ ಪ್ರಮಾಣವಚನ ಸಮಾರಂಭ
ನಾಳೆ ಸಂಜೆ ಬೆಂಗಳೂರಿನ ಕೆಂಪೇಗೌಡ ಸ್ಟೇಡಿಯಂ ಅಥವಾ ಲೋಕಭವನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೊದಲು ಪ್ರಮಾಣವಚನ ಸ್ವೀಕರಿಸಲಿದ್ದು, ನಂತರ 10 ಮಂದಿ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಸಮಾರಂಭಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರು ಆಗಮಿಸುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಅಂತಿಮ ಸಭೆ
ಇಂದು ದೆಹಲಿಯ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರಮುಖ ಸಭೆ ನಡೆಯಿತು. ಕೆ.ಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತೀವ್ರ ಚರ್ಚೆ ನಡೆಯಿತು. ಈ ಸಭೆಯಲ್ಲಿ ಮೊದಲ ಹಂತದ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಆದರೆ, ಈ ಪಟ್ಟಿಗೆ ಮತ್ತೆ ಮೂವರು ಸಚಿವರ ಸೇರ್ಪಡೆಯ ಸಾಧ್ಯತೆಯೂ ಇದೆ. ಅಂತಿಮವಾದ್ರೆ 14 ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಡಿಕೆ ಸಂಪುಟದ ಮೊದಲ ಪಟ್ಟಿ
ಗ್ಯಾರಂಟಿ ನ್ಯೂಸ್‌ಗೆ ಲಭ್ಯವಾಗಿರುವ ಎಕ್ಸ್ಕ್ಲೂಸಿವ್ ಮಾಹಿತಿಯ ಪ್ರಕಾರ, ಈ ಕೆಳಗಿನ 10 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
| ಸಂ. | ಸಚಿವರ ಹೆಸರು | ಕ್ಷೇತ್ರ |
|---|---|---|
| 1 | ಜಿ. ಪರಮೇಶ್ವರ್ | ಕೊರಟಗೆರೆ |
| 2 | ಸತೀಶ್ ಜಾರಕಿಹೊಳಿ | ಯಮಕನ ಮರಡಿ |
| 3 | ಲಕ್ಷ್ಮೀ ಹೆಬ್ಬಾಳ್ಕರ್ / ರೂಪಾ ಶಶಿಧರ್ | ಬೆಳಗಾವಿ / ಕೆಜಿಎಫ್ |
| 4 | ಪ್ರಿಯಾಂಕ್ ಖರ್ಗೆ | ಚಿತ್ತಾಪುರ |
| 5 | ಕೃಷ್ಣ ಬೈರೇಗೌಡ | ಬ್ಯಾಟರಾಯನಪುರ |
| 6 | ಯು.ಟಿ. ಖಾದರ್ | ಮಂಗಳೂರು |
| 7 | ಯತೀಂದ್ರ ಸಿದ್ದರಾಮಯ್ಯ | MLC |
| 8 | ಎಂ.ಬಿ. ಪಾಟೀಲ್ | ಬಬಲೇಶ್ವರ |
| 9 | ಕೆ.ಜೆ. ಜಾರ್ಜ್ | ಸರ್ವಜ್ಞನಗರ |
| 10 | ರಾಮಲಿಂಗಾ ರೆಡ್ಡಿ | ಬಿ.ಟಿ.ಎಂ. ಲೇಔಟ್ |
ಸಂಜೆ ಇನ್ನೊಂದು ಸುತ್ತಿನ ಮಾತುಕತೆ
ಮೇಲಿನ ಪಟ್ಟಿ ಆಧರಿಸಿ ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಇದೇ ಸಭೆಯಲ್ಲಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಹೈಕಮಾಂಡ್ ಈಗಾಗಲೇ ಹೆಚ್ಚಿನ ಹೆಸರುಗಳನ್ನು ಅನುಮೋದನೆ ಮಾಡಿದ್ದು, ಸಮತೋಲನದ ಸಂಪುಟ ರಚನೆಗೆ ಒತ್ತು ನೀಡಲಾಗಿದೆ.
ಈ ಪಟ್ಟಿಯಲ್ಲಿ ಮಹಿಳಾ ಸಚಿವೆಯರಿಗೂ ಅವಕಾಶ ನೀಡಲಾಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅಥವಾ ರೂಪಾ ಶಶಿಧರ್ ಅವರಲ್ಲಿ ಒಬ್ಬರು ಸಚಿವರಾಗಲಿದ್ದಾರೆ.




